ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವಾಗ ಮಂಡ್ಯದ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳದೆ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳದೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದು ಖಂಡನೀಯ. ಈ ಸಂಬಂಧ ಮಂಗಳವಾರ ನಡೆಯುವ ಬೆಂಗಳೂರು ಬಂದ್ಗೆ ಬಿಜೆಪಿ ಬೆಂಬಲ ಇದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೀರಿನ ವಿಚಾರ, ರಾಜ್ಯದ ಹಿತಾಸಕ್ತಿ ಸಂದರ್ಭದಲ್ಲಿ ಬಿಜೆಪಿ ನೆರವಿಗೆ ನಿಲ್ಲಲಿದೆ ಎಂದು ನಮ್ಮ ನಾಯಕರಾದ ಯಡಿಯೂರಪ್ಪನವರು ತಿಳಿಸಿದ್ದಾರೆ. ಕಬ್ಬು ಬೆಳೆಗಾರರ ಸಂಘಟನೆ ನೇತೃತ್ವದಲ್ಲಿ ಕೆಲವು ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿವೆ. ಇದನ್ನು ಬಿಜೆಪಿ ಬೆಂಬಲಿಸಲಿದ್ದು, ನಮ್ಮೆಲ್ಲ ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಾರೆ. ಬೆಂಗಳೂರಿನ ಶಾಂತಿಯನ್ನು ಕಾಪಾಡಿಕೊಂಡು ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.
ಬೆಂಗಳೂರಿಗೆ 3 ತಿಂಗಳಿಗಾಗುವಷ್ಟು ನೀರಿಲ್ಲ
ವಾಡಿಕೆಗಿಂತ ಶೇ 42ರಷ್ಟು ಮಳೆ ಕಡಿಮೆ ಇದೆ ಎಂದು ಸರಕಾರವೇ ತಿಳಿಸಿದೆ. ಈಗ ಕೆಆರ್ಎಸ್ನಲ್ಲಿ ಕೇವಲ 20 ಟಿಎಂಸಿ ನೀರಿದೆ ಎಂಬ ಮಾಹಿತಿ ಇದೆ. ಈಗ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ 7 ಟಿಎಂಸಿ ಖಾಲಿ ಆಗಲಿದೆ. ಉಳಿಯುವುದು 13 ಟಿಎಂಸಿ. ಡೆಡ್ ಸ್ಟೋರೇಜ್ 7 ಟಿಎಂಸಿ. ಉಳಿದ 6 ಟಿಎಂಸಿ ಬೆಂಗಳೂರಿನ ಜನರ ಕುಡಿಯುವ ನೀರಿಗೆ 3 ತಿಂಗಳಿಗೂ ಸಾಕಾಗದು ಎಂದು ಸಿ.ಟಿ.ರವಿ ಹೇಳಿದರು.
ಕಾಂಗ್ರೆಸ್ ಗಟ್ಟಿ ತೀರ್ಮಾನ ಹೇಳುತ್ತದೆಂದು ನಿರೀಕ್ಷೆಯಿತ್ತು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ನೀರು ಬಿಡುವುದಿಲ್ಲ ಎಂಬ ಗಟ್ಟಿ ತೀರ್ಮಾನವನ್ನು ನಿರೀಕ್ಷೆ ಮಾಡಿದ್ದೆವು. ಅಂತಹ ತೀರ್ಮಾನ ತೆಗೆದುಕೊಂಡರೆ 7 ಕೋಟಿ ಜನರು ನಿಮ್ಮ ಜೊತೆಗೆ ಇರುತ್ತಾರೆ ಎಂದು ಸರ್ವಪಕ್ಷ ಸಭೆಯಲ್ಲಿ ಸ್ಪಷ್ಟಪಡಿಸಿದ್ದೇವೆ. ನಮ್ಮಲ್ಲಿ ಕುಡಿಯುವ ನೀರಿಗೇ ಸಮಸ್ಯೆ ಇದೆ. ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿದ್ದರೂ ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ. ಹಾಗಿದ್ದಾಗ ಯೋಚಿಸಿ ನಿರ್ಧಾರ ಮಾಡಬೇಕಿತ್ತಲ್ಲವೇ ಎಂದು ಕೇಳಿದರು.
ಇವರು ಕಾಕಾ ಪಾಟೀಲ್ ನಿನಗೂ ಫ್ರೀ ಎಂದಂತೆ ಸ್ಟಾಲಿನ್ ನಿನ್ಗೂ ಫ್ರೀ ಎಂದು ನೀರು ಬಿಡುತ್ತಿದ್ದಾರೆ. ಈ ಬೇಜವಾಬ್ದಾರಿ ನಿಲುವಿನ ವಿರುದ್ಧ ವಿವಿಧ ಸಂಘಟನೆಗಳು ಕರೆಕೊಟ್ಟ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.
ನಮ್ಮ ನೀರು ನಮ್ಮ ಹಕ್ಕು ಚಳುವಳಿ ಎಲ್ಲಿದೆ ?
ನಮ್ಮ ನೀರು ನಮ್ಮ ಹಕ್ಕು ಚಳವಳಿಯನ್ನು ಕಾಂಗ್ರೆಸ್ಸೇ ಮಾಡಿತ್ತಲ್ಲವೇ? ಎಲ್ಲಿದೆ ನಮ್ಮ ಹಕ್ಕು ಶಿವಕುಮಾರ್ ಅವರೇ? ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ನೀರು ಬಿಡುವುದಿಲ್ಲ ಎಂದು ತೀರ್ಮಾನ ತೆಗೆದುಕೊಳ್ಳಿ ಎಂದು ಸವಾಲಾಕಿದರು. ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟಿದ್ದೀರಲ್ಲ? ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು.
ಇಂಡಿಯ ಮೈತ್ರಿಕೂಟವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ರಾಜ್ಯದ ಜನರ ಹಿತವನ್ನು ಬಲಿ ಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಹೈಕಮಾಂಡಿನ ಮೆಚ್ಚುಗೆ ಪಡೆಯಲು ನೀವು ಕೇಳುವ ಮೊದಲೇ ನೀರು ಬಿಟ್ಟಿದ್ದೀರಲ್ಲವೇ. ಸಾಕಷ್ಟು ನೀರಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ ಎಂದು ನುಡಿದರು.
ಗೋಹತ್ಯೆಗೆ ಕಾಂಗ್ರೆಸ್ ಸರಕಾರದ ಕುಮ್ಮಕ್ಕು
ಈ ವೇಳೆ ಅಕ್ರಮ ಗೋಹತ್ಯೆಗೆ ಕಾಂಗ್ರೆಸ್ ಸರಕಾರ ಕುಮ್ಮಕ್ಕು ಕೊಡುವಂತಿದೆ. ಆಡಳಿತ ನಡೆಸುವ ಕಾಂಗ್ರೆಸ್ ಕೃಪಾಕಟಾಕ್ಷ ಇಲ್ಲದೆ ಇಂಥ ಬೃಹತ್ ಗೋಮಾಂಸ ಸಾಗಾಟ ವ್ಯವಸ್ಥೆ ನಿರ್ಮಾಣ ಆಗಲು ಅಸಾಧ್ಯ. ಹಾಗಿದ್ದರೆ ಗೋಹತ್ಯಾ ನಿಷೇಧ ಕಾಯ್ದೆ ಯಾಕೆ ಇಟ್ಟುಕೊಂಡಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಟೀಕಿಸಿದರು.
ರಾಜಕಾರಣ ಎಂದರೆ ಕೇವಲ ಗಣಿತ (ಮ್ಯಾಥಮೆಟಿಕ್ಸ್) ಅಲ್ಲ. ಅದರ ಹಿಂದೆ ಕೆಮಿಸ್ಟ್ರಿ ಇರುತ್ತದೆ. ಆ ಕೆಮಿಸ್ಟ್ರಿ ಕಾರ್ಯಕರ್ತರ ಹಂತದಲ್ಲೇ ಸಮನ್ವಯ ಆಗುವ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಎರಡೂ ಪಕ್ಷಗಳಿಗಿದೆ ಎಂದು ಅವರು ಬಿಜೆಪಿ- ಜೆಡಿಎಸ್ ನಡುವಿನ ಮೈತ್ರಿ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. ಈಗ ಎನ್ಡಿಎ ಭಾಗವಾಗಿ ಜೆಡಿಎಸ್ ಅನ್ನು ಸೇರಿಸಿಕೊಂಡಿದ್ದಾರೆ ಎಂದು ವಿವರಿಸಿದರು.