ಬ್ರಿಜ್ ಭೂಷಣ್ ಸಿಂಗ್ ಅವಕಾಶ ಸಿಕ್ಕಾಗೆಲ್ಲಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳಕ್ಕೆ ಯತ್ನ: ದೆಹಲಿ ಪೊಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅವಕಾಶ ಸಿಕ್ಕಾಗಲೆಲ್ಲಾ ಮಹಿಳಾ ಕುಸ್ತಿಪಟುಗಳಿಗೆ (Wrestlers) ಲೈಂಗಿಕ ಕಿರುಕುಳ (Sexual Harassment) ನೀಡಲು ಪ್ರಯತ್ನಿಸಿದ್ದಾರೆ ಎಂದು ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ವೇಳೆ ಬ್ರಿಜ್ ಭೂಷಣ್ ವಿರುದ್ಧ ಗಂಭೀರ ಆರೋಪ ಮಾಡಿರುವ ದೆಹಲಿ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿವೆ ಎಂದು ವಾದಿಸಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲಾ ಅವರು ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ. ಅಂತಹ ಯಾವುದೇ ಅವಕಾಶವನ್ನು ಅವರು ಎಂದಿಗೂ ಕಳೆದುಕೊಂಡಿಲ್ಲ ತಿಳಿಸಿದ್ದಾರೆ.

ಮತ್ತೊಂದು ದೂರನ್ನು ಉಲ್ಲೇಖಿಸಿ, ತಜಕಿಸ್ತಾನದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ ಸಂದರ್ಭದಲ್ಲಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅನುಮತಿಯಿಲ್ಲದೆ ತನ್ನ ಅಂಗಿಯನ್ನು ಮೇಲಕ್ಕೆತ್ತಿ, ಅನುಚಿತವಾಗಿ ತನ್ನ ಹೊಟ್ಟೆಯನ್ನು ಮುಟ್ಟಿದ್ದಾರೆ ಎಂದು ಮಹಿಳಾ ಕುಸ್ತಿಪಟು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್‌ನ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣವನ್ನು ಉಲ್ಲೇಖಿಸಿ, ಆ ಪ್ರಕರಣದಲ್ಲಿ ಹಲವಾರು ಎಫ್‌ಐಆರ್‌ಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಆದರೆ ನ್ಯಾಯಾಲಯವು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಆಲಿಸಿದೆ ಎಂದು ಹೇಳಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳ ತನಿಖೆಗಾಗಿ ಸರ್ಕಾರ ರಚಿಸಿದ್ದ ಮೇಲ್ವಿಚಾರಣಾ ಸಮಿತಿಯು ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ದೆಹಲಿ ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.

ಆರು ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಧಿಕೃತವಾಗಿ ಲೈಂಗಿಕ ದೌರ್ಜನ್ಯ ಆರೋಪ ಹೊರಿಸುವ ವಿಚಾರವಾಗಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ ಪೊಲೀಸರು ಹೇಳಿಕೆ ನೀಡಿದ್ದಾರೆ. ಪೊಲೀಸರು ಈ ಹಿಂದೆ ಬ್ರಿಜ್ ಭೂಷಣ್ ವಿರುದ್ಧ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದರು.

ಶನಿವಾರ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಬ್ರಿಜ್ ಭೂಷಣ್ ಸಿಂಗ್ಗೆ ವಿನಾಯಿತಿ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here