ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿಶ್ಚಿತವಾಗಿ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಬಹುಶಃ ತೆಲಂಗಾಣವನ್ನು ಗೆಲ್ಲಲಿದ್ದೇವೆ. ನಾವು ಖಂಡಿತವಾಗಿಯೂ ಮಧ್ಯಪ್ರದೇಶ, ಛತ್ತೀಸ್ಗಢವನ್ನು ಗೆಲ್ಲುತ್ತಿದ್ದೇವೆ, ರಾಜಸ್ಥಾನದಲ್ಲಿ ಗೆಲುವಿನ ಸನಿಹದಲ್ಲಿದ್ದೇವೆ ಎಂದು ನಾವು ಭಾವಿಸುತ್ತೇವೆ. ಬಿಜೆಪಿ ಆಂತರಿಕವಾಗಿಯೂ ಅದನ್ನೇ ಹೇಳುತ್ತಿದೆ ಎಂಬ ರಾಹುಲ್ ಗಾಂಧಿ ಹೇಳಿದ್ದಾರೆ.
ರ್ನಾಟಕ ಚುನಾವಣೆಯಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಘಟನೆಯೊಂದಕ್ಕೆ ತಮ್ಮದೇ ಆದ ನಿರೂಪಣೆಯನ್ನು ಮಾಡುವ ಬಿಜೆಪಿ ತಂತ್ರ ವಿಫಲವಾಗುತ್ತಿದೆ ಎಂಬುದು ಸಾಬೀತಾಗಿದೆ.
ನಾವು ಕರ್ನಾಟಕದಲ್ಲಿ ಏನು ಮಾಡಿದ್ದೇವೆ. ಬಿಜೆಪಿಗೆ ತಮ್ಮ ಹೊಸ ನಿರೂಪಣೆಯನ್ನು ವ್ಯಾಖ್ಯಾನಿಸಲು ಸಾಧ್ಯವಾಗದ ರೀತಿಯಲ್ಲಿ ನಾವು ಚುನಾವಣೆಯಲ್ಲಿ ಹೋರಾಡಿದ್ದೇವೆ. ಜನರು ಬಯಸುವ ಮೂಲಭೂತ ವಿಷಯ ಬೇರೆ ಇದೆ. ಆದರೆ ಬಿಜೆಪಿ ಚರ್ಚೆಯನ್ನು ನಡೆಸಲು ಬಯಸುವುದಿಲ್ಲ. ಅದಕ್ಕೆ ಬದಲಾಗಿ ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಧರ್ಮಾಧರಿತ ದಾಳಿ ಮಾಡಿದ್ದಾರೆ ಎಂದು ರಾಹುಲ್ ಹೇಳಿದರು.
ನಾವು ಒಂದು ವಿಷಯವನ್ನು ಚರ್ಚೆಗೆ ತಂದಾಗಲೆಲ್ಲಾ, ಬಿಜೆಪಿ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ವಿಷಯಗಳನ್ನು ಬಳಸುತ್ತಾರೆ. ಆದರೆ ಇದನ್ನು ಹೇಗೆ ಎದುರಿಸಬೇಕೆಂದು ನಾವು ಈಗ ಕಲಿತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯು ಜನರ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಬಿಜೆಪಿಯ ಗುರಿಯಾಗಿದೆ ಎಂದು ಹೇಳಿದರು. ಇದು ಬಿಜೆಪಿಯ ಗೊಂದಲದ ತಂತ್ರಗಳಲ್ಲಿ ಒಂದಾಗಿದೆ. ಸಂಪತ್ತಿನ ಕೇಂದ್ರೀಕರಣ, ಸಂಪತ್ತಿನ ಭಾರಿ ಅಸಮಾನತೆ, ನಿರುದ್ಯೋಗ ಸಮಸ್ಯೆ, ಕೆಳಜಾತಿ, ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಭಾರಿ ಅನ್ಯಾಯ ಮತ್ತು ಬೆಲೆ ಏರಿಕೆ ಭಾರತದ ಪ್ರಮುಖ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದರು.
ಪ್ರತಿಪಕ್ಷಗಳ ಬಣ ಇಂಡಿಯಾ ಬ್ಲಾಕ್ ಈಗ ಯಾವುದೇ ರಾಜಕೀಯ ಪಕ್ಷವೊಂದರ ವಿರುದ್ಧ ಹೋರಾಡುತ್ತಿಲ್ಲ. ಭಾರತದ ಉಳಿವಿಗಾಗಿ ಹೋರಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ನಾವು ಭಾರತದ ಕಲ್ಪನೆಯನ್ನು ರಕ್ಷಿಸಲು ಹೋರಾಡುತ್ತಿದ್ದೇವೆ. ಅದಕ್ಕಾಗಿಯೇ ಗುಂಪಿಗೆ ಇಂಡಿಯಾ ಎಂದು ಹೆಸರು ನೀಡಿದ್ದೇವೆ ಎಂದು ಅವರು ಹೇಳಿದರು.