ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ದೇವಾಲಯ ಹಿಂದೂಗಳ ಅಧ್ಯಾತ್ಮಿಕ ತಾಣ, ಅಚ್ಚರಿ ಹಾಗೂ ಕೌತುಗಳ ಸಂಗಮ, ಇದು ಜಗತ್ತಿನ ಎರಡನೇ ಅತೀ ದೊಡ್ಡ ದೇವಸ್ಥಾನ. ಇನ್ನೊಂದು ಪ್ರಮುಖ ವಿಶೇಷತೆ ಏನು ಗೊತ್ತಾ? ಈ ದೇಗುಲ ಇರುವುದು ದೂರದ ಅಮೆರಿಕದಲ್ಲಿ!
ಹೌದು, ಅಮೆರಿಕದಲ್ಲಿ ಜಗತ್ತಿನ ಎರಡನೇ ಅತೀ ದೊಡ್ಡ ದೇಗುಲ ತಲೆಯೆತ್ತಿದ್ದು, ದೇಗುಲಕ್ಕೆ ಅಕ್ಷರಧಾಮ ಎನ್ನುವ ಹೆಸರಿಡಲಾಗಿದೆ. ಒಟ್ಟಾರೆ 12 ವರ್ಷಗಳ ಪರಿಶ್ರಮದಿಂದ ದೇಗುಲ ಲೋಕಾರ್ಪಣೆಗೆ ತಯಾರಾಗಿದೆ.
ಬರೋಬ್ಬರಿ 183 ಎಕರೆ ಪ್ರದೇಶದಲ್ಲಿ ಅಕ್ಷರಧಾಮ ಹರಡಿದ್ದು, ಇದೇ ಅಕ್ಟೋಬರ್ 8ರಂದು ಲೋಕಾರ್ಪಣೆಯಾಗಲಿದೆ. ಅಮೆರಿಕ ನೆಲದಲ್ಲಿ ಬೃಹತ್ ದೇಗುಲ ಸ್ಥಾಪನೆ ಇತಿಹಾಸವೇ ಆಗಿದೆ.
ವಾಷಿಂಗ್ಟನ್ನಿಂದ ಸುಮಾರು 280 ಕಿ.ಮೀ ದೂರದ ನ್ಯೂಜೆರ್ಸಿಯ ಪುಟ್ಟ ಟೌನ್ಶಿಪ್ನಲ್ಲಿ ಸ್ವಾಮಿ ನಾರಾಯಣದ ದೇಗುಲ ತಲೆಯೆತ್ತಿದೆ. ಈ ದೇಗುಲವನ್ನು ನೋಡಿದರೆ, ಇದನ್ನು ನಿರ್ಮಿಸಲು ಬರೋಬ್ಬರಿ 12 ವರ್ಷಗಳೇ ಕಳೆದಿವೆ ಎಂದರೆ ಯಾವ ಆಶ್ಚರ್ಯವೂ ಇಲ್ಲ.
255 ಅಡಿ ಉದ್ದ ಹಾಗೂ 354 ಅಡಿ ಅಗಲವಿರುವ ಈ ದೇಗುಲವನ್ನು ಹಿಂದೂ ಧರ್ಮಗ್ರಂಥಗಳ ಅನುಸಾರ ಕಟ್ಟಲಾಗಿದೆ. ಒಟ್ಟಾರೆ 11 ಸಆವಿರಕ್ಕೂ ಹೆಚ್ಚು ಪ್ರತಿಮೆಗಳನ್ನು ದೇಗುಲ ಒಳಗೊಂಡಿದೆ. ಒಂದು ಮುಖ್ಯ ದೇಗುಲ, 12 ಉಪ ದೇಗುಲ ಹಾಗೂ ಒಂಬತ್ತು ಶಿಖರಗಳು ಹಾಗೂ ಪಿರಮಿಡ್ಗಳಿವೆ.
ಭಾರತೀಯ ದೇಗುಲವಾದ್ದರಿಂದ ಮೆಟ್ಟಿಲು ಬಾವಿಯೂ ಇಲ್ಲಿದೆ. ಭಾರತದ ಪವಿತ್ರ ನದಿಗಳಿಂದ ನೀರನ್ನ ತಂದು ಇಲ್ಲಿಗೆ ಹಾಕಾಲಾಗಿದೆ. ಒಟ್ಟಾರೆ 300 ನದಿಗಳ ಪವಿತ್ರ ನೀರು ಈ ದೇಗುಲದಲ್ಲಿದೆ.
ಒಟ್ಟಾರೆ ಈ ದೇಗುಲ ಸಾವಿರಾರು ವರ್ಷಗಳು ಬಾಳಿಕೆ ಬರುವಷ್ಟು ಗಟ್ಟಿಮುಟ್ಟಾಗಿದೆ ಅಮೆರಿಕದ 12,000 ಮಂದಿ ಸ್ವಯಂ ಸೇವಕರು ದೇಗುಲ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಈ ದೇಗುಲ ನಿರ್ಮಾಣಕ್ಕೆ ಗುಲಾಬಿ ಮರಳುಗಲ್ಲು, ಅಮೃತಶಿಲೆ, ಗ್ರಾನೈಟ್ ಹಾಗೂ ಸುಣ್ಣದ ಕಲ್ಲನ್ನು ಬಳಕೆ ಮಾಡಲಾಗಿದೆ.
ಅಕ್ಟೋಬರ್ 8 ರಂದು ದೇಗುಲ ಲೋಕಾರ್ಪಣೆಯಾಗಲಿದ್ದು, 10 ದಿನಗಳ ಬಳಿಕ ದರುಶನಕ್ಕೆ ಅನುಮತಿ ನೀಡಲಾಗಿದೆ.