ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ ಬಿಐ ನೀಡಿದ್ದ 2,000 ರೂ. ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಿಕೊಳ್ಳಲು ಗಡುವು ಸನಿಹವಾಗಿದ್ದು, ಇನ್ನು ಕೇವಲ 5 ದಿನಗಳಷ್ಟೇ ಬಾಕಿ ಉಳಿದಿದೆ.
ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಸೆ. 30 ರಂದು ಕೊನೆಯ ದಿನಾಂಕವನ್ನು ನೀಡಿದೆ.
ಆದ್ರೆ ಇನ್ನೂ 240 ಬಿಲಿಯನ್ ರೂಪಾಯಿ (2.9 ಬಿಲಿಯನ್ ಡಾಲರ್) 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದು, ಬ್ಯಾಂಕುಗಳಿಗೆ ಹಿಂತಿರುಗಿಲ್ಲ.
ಮಾರ್ಚ್ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು. ಆದರೆ, ಆಗಸ್ಟ್ 31,2023ರ ತನಕ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆಯಲಾಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. ಹೀಗಾಗಿ ನಿಮ್ಮ ಬಳಿ ಕೂಡ 2 ಸಾವಿರ ರೂ. ನೋಟುಗಳಿದ್ರೆ ತಕ್ಷಣ ಹಿಂತಿರುಗಿಸಿ ಇಲ್ಲವಾದ್ರೆ ಸೆ.30ರ ಬಳಿಕ ಅವುಗಳು ಮಾನ್ಯತೆ ಕಳೆದುಕೊಳ್ಳಲಿವೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಬಳಿಕ ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ತೀರ್ಮಾನವನ್ನು ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿತ್ತು. ಮಾರ್ಚ್ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು.
ಆರ್ ಬಿಐ 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಹಣಕಾಸು ಸಚಿವಾಲಯ ವಿಸ್ತರಿಸುವ ಸಾಧ್ಯತೆ ಕಾಣಿಸುತ್ತಿಲ್ಲ. ಜುಲೈ ಕೊನೆಯಲ್ಲಿ ಲೋಕಸಭೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಬ್ಯಾಂಕ್ ಗಳಲ್ಲಿ 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಸೆಪ್ಟೆಂಬರ್ 30ರ ಬಳಿಕ ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.
2,000ರೂ. ಮುಖಬೆಲೆಯ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿಯು ಬ್ಯಾಂಕಿನ ಗ್ರಾಹಕರಾಗಿರುವುದು ಅನಿವಾರ್ಯವಲ್ಲ. ಖಾತೆದಾರರಲ್ಲದವರು 2,000 ರೂ. ಮೌಲ್ಯದ ಬ್ಯಾಂಕ್ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ 20,000ರೂ. ಮಿತಿಯವರೆಗೆ ಬದಲಾಯಿಸಬಹುದು. ಈ ವಿನಿಮಯ ಸೌಲಭ್ಯವನ್ನು ಪಡೆಯಲು ಜನರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
2,000ರೂ. ನೋಟು ವಿನಿಮಯಕ್ಕೆ ಆರ್ ಬಿಐ ಒಂದು ನಿರ್ಬಂಧ ವಿಧಿಸಿದೆ. ಅದೇನೆಂದರೆ ಒಂದು ದಿನ ಒಬ್ಬ ವ್ಯಕ್ತಿ 2,000ರೂ. ನೋಟನ್ನು ಗರಿಷ್ಠ 20 ಸಾವಿರ ರೂ. ತನಕ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಒಂದು ವೇಳೆ ಸೆಪ್ಟೆಂಬರ್ 30ರ ಬಳಿಕ ಕೂಡ 2000ರೂ. ನೋಟು ನಿಮ್ಮ ಬಳಿಯಿದ್ದರೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಆ ನೋಟುಗಳನ್ನು ನಿಮಗೆ ಚಲಾವಣೆ ಮಾಡಲು ಸಾಧ್ಯವಾಗೋದಿಲ್ಲ ಅಷ್ಟೆ.