ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಶಲ ಅಭಿವೃದ್ಧಿ ನಿಗಮದ ಹಗರಣದಲ್ಲಿ ಬಂಧನವಾಗಿರುವ ಚಂದ್ರಬಾಬು ನಾಯ್ಡುಅಪರಾಧ ತನಿಖಾ ಇಲಾಖೆ (CID) ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ (Supreme Court) ಸೋಮವಾರ ನಿರಾಕರಿಸಿದೆ.
ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠವು , ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಸಲ್ಲಿಕೆ ಮಾಡಿದ ನಂತರ ತುರ್ತು ವಿಚಾರಣೆಯ ಮನವಿಯನ್ನು ಪರಿಗಣಿಸಲು ನಿರಾಕರಿಸಿತು.
ಟಿಡಿಪಿ ನಾಯಕನಿಗೆ ಕಾನೂನು ಹಿನ್ನಡೆಗಳ ಬೆನ್ನಲ್ಲೇ ಆಂಧ್ರಪ್ರದೇಶ ಹೈಕೋರ್ಟ್, ಪ್ರಕರಣ ರದ್ದು ಮಾಡಲು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ವಿಜಯವಾಡದ ಎಸಿಬಿ ನ್ಯಾಯಾಲಯವು ಅವರ ಕಸ್ಟಡಿಯನ್ನು ಅಕ್ಟೋಬರ್ 5 ರವರೆಗೆ ವಿಸ್ತರಿಸಿದೆ.
ಸೋಮವಾರ ಎಸಿಬಿ ನ್ಯಾಯಾಲಯದಲ್ಲಿ ಚಂದ್ರಬಾಬು ಜಾಮೀನು ಅರ್ಜಿ ವಿಚಾರಣೆ ನಡೆದು ಸಿಐಡಿಯಿಂದ ಪ್ರತಿಕ್ರಿಯೆ ದಾಖಲಿಸಲಾಗಿತ್ತು. ತನಿಖಾ ಸಂಸ್ಥೆಯು ಕಸ್ಟಡಿ ವಿಚಾರಣೆಯ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಸಿಐಡಿ ಚಂದ್ರಬಾಬು ನಾಯ್ಡು ಅವರನ್ನು ಇನ್ನೂ 5 ದಿನಗಳ ಕಾಲ ಕಸ್ಟಡಿಗೆ ಕೇಳಿದೆ ಮತ್ತು ಅದಕ್ಕಾಗಿ ವಿಸ್ತರಣೆ ಮೆಮೊ ಸಲ್ಲಿಸಿದೆ. ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣ ಮತ್ತು ಎಪಿ ಫೈಬರ್ ನೆಟ್ ಪ್ರಕರಣದಲ್ಲಿ ಸಿಐಡಿ ನ್ಯಾಯಾಲಯಕ್ಕೆ ಪಿಟಿ ವಾರಂಟ್ ಅರ್ಜಿಗಳನ್ನು ಸಲ್ಲಿಸಿದೆ.