Wednesday, December 24, 2025

ಯಲಹಂಕದಲ್ಲಿ ಚೀನಾ ಮಾದರಿಯ ಮೆಗಾ ರೈಲ್ವೆ ಟರ್ಮಿನಲ್: ರೈಲ್ವೇ ಇಲಾಖೆಯ ಬಿಗ್ ಬಜೆಟ್ ಪ್ಲ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಬೆಂಗಳೂರಿನ ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯ ಸಂಪೂರ್ಣ ಎಲಿವೇಟೆಡ್ ರೈಲ್ವೆ ಟರ್ಮಿನಲ್ ನಿರ್ಮಿಸುವ ಪ್ರಸ್ತಾವನೆ ಸಿದ್ದಗೊಂಡಿದೆ.

ನೈಋತ್ಯ ರೈಲ್ವೇ (SWR) ಸಿದ್ಧಪಡಿಸಿರುವ ಈ ಯೋಜನೆ ಅನುಷ್ಠಾನಗೊಂಡರೆ, ಇದು ಬೆಂಗಳೂರಿನ ನಾಲ್ಕನೇ ಪ್ರಮುಖ ರೈಲ್ವೆ ಟರ್ಮಿನಲ್ ಆಗಲಿದೆ. ಕೆಎಸ್‌ಆರ್ ಬೆಂಗಳೂರು ಸಿಟಿ, ಯಶವಂತಪುರ ಮತ್ತು ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿಕ ಯಲಹಂಕ ಹೊಸ ಕೇಂದ್ರವಾಗಿ ಬೆಳೆಯಲಿದೆ.

ರೈಲ್ವೆ ವೀಲ್ ಫ್ಯಾಕ್ಟರಿ ಭೂಮಿಯ ಭಾಗದಲ್ಲಿ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದ್ದು, ಸುಮಾರು 20 ಎಕರೆ ವಿಸ್ತೀರ್ಣದಲ್ಲಿ 16 ಪ್ಲಾಟ್‌ಫಾರ್ಮ್‌ಗಳ ವ್ಯವಸ್ಥೆ ಇರಲಿದೆ. ಪ್ರಸ್ತುತ ಐದು ಪ್ಲಾಟ್‌ಫಾರ್ಮ್ ಹೊಂದಿರುವ ಯಲಹಂಕ ನಿಲ್ದಾಣವನ್ನು ಬಹುಹಂತದ ಮೆಗಾ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ನೆಲಮಾಳಿಗೆ, ನೆಲಮಹಡಿ ಮತ್ತು ಮೇಲಿನ ಹಂತಗಳನ್ನು ಒಳಗೊಂಡ ವಿನ್ಯಾಸದಲ್ಲಿ ರೈಲು ಹಳಿಗಳು ಎತ್ತರದ ಮಟ್ಟದಲ್ಲೇ ಸಾಗಲಿವೆ.

ಮೆಟ್ರೋ ಸಂಪರ್ಕ, ಪ್ರತ್ಯೇಕ ಆಗಮನೆ–ನಿರ್ಗಮನ ವ್ಯವಸ್ಥೆ ಮತ್ತು ವಿಮಾನ ನಿಲ್ದಾಣದಂತೆಯೇ ಪ್ರಯಾಣಿಕರ ಚಲನ ನಿಯಂತ್ರಣ ಈ ಯೋಜನೆಯ ವಿಶೇಷತೆ. ಅಂದಾಜು 6,000 ಕೋಟಿ ರೂ. ವೆಚ್ಚದ ಈ ಯೋಜನೆಗೆ ಇನ್ನೂ ರೈಲ್ವೇ ಮಂಡಳಿಯ ಅಂತಿಮ ಅನುಮೋದನೆ ಲಭ್ಯವಾಗಬೇಕಿದೆ.

error: Content is protected !!