ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ , ದಿಲ್ಲಿ ಅಸೆಂಬ್ಲಿ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿದೆ. ಸೆಪ್ಟೆಂಬರ್ 18ರಿಂದ ಐದು ದಿನಗಳ ಕಾಲ ನಡೆದ ವಿಶೇಷ ಸಂಸತ್ ಅಧಿವೇಶನದ ವೇಳೆ ಮಹಿಳಾ ಮೀಸಲು ವಿಧೇಯಕಕ್ಕೆ ಲೋಕಸಭೆ ಮತ್ತು ರಾಜ್ಯಸಭೆಗಳು ತಮ್ಮ ಅಂಗೀಕಾರ ನೀಡಿದ್ದವು. ಭಾರತದ ಪಾಲಿಗೆ ಇದೊಂದು ಐತಾಹಿಸಿಕ ನಿರ್ಧಾರವಾಗಿದೆ.
ಉಪರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸುವ ಮೊದಲು, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಚೇರ್ಮನ್ ಜಗದೀಪ್ ಧನಖರ್ ಅವರು ಗುರುವಾರ ಸಂಸತ್ತಿನಲ್ಲಿ ಅಂಗೀಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಸಹಿ ಅಂಕಿತ ಹಾಕಿದರು.
ಮಹಿಳಾ ಮೀಸಲು ವಿಧೇಯಕವು ರಾಜಕೀಯವಾಗಿ ಮಹಿಳೆಯರಿಗೆ ಶಕ್ತಿಯನ್ನು ಒದಗಿಸಲಿದೆ. ದೇಶದಲ್ಲಿ ಪುರಷರಷ್ಟೇ ಮಹಿಳೆಯರಿದ್ದು, ಅವರ ರಾಜಕೀಯ ಪ್ರತಿನಿಧಿತ್ವ ಶೇ.15ಕ್ಕಿಂತಲೂ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ 27 ವರ್ಷಗಳ ಹಿಂದೆಯೇ ಮಹಿಳಾ ಮೀಸಲು ವಿಧೇಯಕ ಜಾರಿಗೆ ಪ್ರಯತ್ನಿಸಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಆ ಬಳಿಕ, ಹಲವು ಸರ್ಕಾರಗಳು ಈ ಕುರಿತು ಪ್ರಯತ್ನ ನಡೆಸಿದ್ದವು. ಅಂತಿಮವಾಗಿ ಈಗ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೆ ತಂದಿದೆ.
2029ರ ಬಳಿಕ ಮಹಿಳಾ ಮೀಸಲು ಜಾರಿಗೆ ಬರಲಿದೆ. ಅದಕ್ಕೂ ಮೊದಲು ಜನಗಣತಿಯನ್ನು ನಡೆಸಬೇಕು. ಅದರ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಬೇಕು. ಆ ಬಳಿಕವಷ್ಟೇ ಮಹಿಳಾ ಮೀಸಲು ವಿಧೇಯಕ ಜಾರಿಗೆ ಬರಲಿದೆ. ಹಾಗಾಗಿ, ಇನ್ನು ಐದು ವರ್ಷಗಳ ಕಾಲ ಕಾಯಬೇಕಾಗುತ್ತದೆ.