ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ವಲಸಿಗರು ತೀವ್ರವಾಗಿ ಹೆಚ್ಚಿರುವ ಅಸ್ಸಾಂನಲ್ಲಿ ಇನ್ನೂ ಶೇಕಡಾ 10ರಷ್ಟು ಬಾಂಗ್ಲಾ ಅಕ್ರಮ ವಲಸಿಗರು ಹೆಚ್ಚಾದರೂ ಅಸ್ಸಾಂ ಬಾಂಗ್ಲಾದ ಪಾಲಾಗಲಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ ಅವರು, ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಂಖ್ಯೆ ಶೇಕಡಾ 10ರಷ್ಟು ಹೆಚ್ಚಾದರು ಆ ಭಾಗಗಳು ಸ್ವಯಂಚಾಲಿತವಾಗಿ ಬಾಂಗ್ಲಾದೇಶದ ಭಾಗವಾಗಲಿದೆ ಎಂದು ಹೇಳಿದ್ದಾರೆ.
ಕಳೆದ 5 ವರ್ಷಗಳಿಂದಲೂ ಈ ವಿಚಾರದ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಅಸ್ಸಾಂನಲ್ಲಿ ಅಲ್ಲಿನ ಜನಸಂಖ್ಯೆಯ ಶೇ. 40ರಷ್ಟು ಜನರು ಬಾಂಗ್ಲಾದೇಶಿಗರಾಗಿದ್ದಾರೆ. ಈ ಪ್ರಮಾಣವೂ ಶೇ. 10ಕ್ಕೆ ಏರಿಕೆಯಾದರೆ ನಾವು ಸ್ವಯಂಚಾಲಿತವಾಗಿ ಬಾಂಗ್ಲಾದೇಶಕ್ಕೆ ಸೇರಿದಂತೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ವಿರುದ್ಧದ ಹಿಂಸಾಚಾರದ ಮಧ್ಯೆ ಅಲ್ಲಿನ ನಾಯಕರು ಭಾರತದ ಸೆವೆನ್ ಸಿಸ್ಟರ್ ಎಂದು ಕರೆಯಲ್ಪಡುವ ಈಶಾನ್ಯದ 7 ರಾಜ್ಯಗಳನ್ನು ಬಾಂಗ್ಲಾದ ಜೊತೆ ವಿಲೀನ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ, ಇದೇ ಕಾರಣಕ್ಕೆ ನಾನು ಕಳೆದ 5 ವರ್ಷಗಳಿಂದ ಬೊಬ್ಬೆ ಹೊಡೆಯುತ್ತಿರುವುದು ಎಂದು ಹೇಳಿದರು.

