ಹೊಸದಿಗಂತ ವರದಿ,ಹಾಸನ:
ಸರ್ಕಾರಿ ಜಾಗ ಸಂರಕ್ಷಣೆ ಮತ್ತು ಒತ್ತುವರಿಯನ್ನು ತೆರವು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿ ಬಿ.ಎ ಪಾಟೀಲ್ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಬೆಂಗಳೂರು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ನಡೆದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಹಕ್ಕುಗಳ ಬಗ್ಗೆ ಆಸಕ್ತಿ ಹೊಂದಿರುವ ನಾವು ಕರ್ತವ್ಯಗಳ ಬಗ್ಗೆ ಕೂಡ ಕಾಳಜಿವಹಿಸಿ ಅನುಷ್ಠಾನ ಮಾಡಬೇಕು. ಯಾವುದೇ ಯೋಜನೆ ಅನುಷ್ಠಾನ ಮಾಡುವಲ್ಲಿ ಏಕೆ ವಿಫಲವಾಗುತ್ತಿದ್ದೇವೆ ಎಂಬುದನ್ನು ವಿಮರ್ಶೆ ಮಾಡಿಕೊಂಡು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದರೆ ಸಫಲತೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ಜೀವನದಲ್ಲಿ ಪ್ರತಿನಿತ್ಯ ಕಲಿಕೆ ಅಗತ್ಯ ಇದರಿಂದ ಜ್ಞಾನ ವೃದ್ದಿಯಾಗುತ್ತದೆ. ಇಂತಹ ಕಾರ್ಯಾಗಾರಗಳು ತಮ್ಮ ವೃತ್ತಿ ಜೀವನದಲ್ಲಿ ಸಹಕಾರಿಯಾಗಲಿದೆ ಎಂದ ಅವರು ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಎಲ್ಲಾ ಅಧಿಕಾರಿಗಳ ಜವಾಬ್ದಾರಿ ಇರುತ್ತದೆ. ನಿಮಗೆ ನೈಪುಣ್ಯತೆ ಇದ್ದರೆ ಯಾರಿಂದಲು ಮೋಸಹೋಗುವ ಸಂದರ್ಭ ಬರುವುದಿಲ್ಲ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ತ್ಯಾಗರಾಜ ಎನ್ ಇನ್ನವಳ್ಳಿ ಮಾತನಾಡಿ ಸ್ವಂತ ಆಸ್ತಿ ಕಾಪಾಡುವ ರೀತಿ ಸರ್ಕಾರಿ ಆಸ್ತಿಗಳನ್ನು ಸಂರಕ್ಷಣೆ ಮಾಡಬೇಕು. ತಳ ಹಂತದ ಅಧಿಕಾರಿಗಳು ಕಾಳಜಿಯಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕ ಸ್ವತ್ತನ್ನು ರಕ್ಷಿಸಿಸಬೇಕು. ನಾವೆಲ್ಲ ಸಂವಿಧಾನದಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಕಾನೂನು ಬದ್ದವಾಗಿ ಕೆಲಸ ಮಾಡಿದರೆ ಎಲ್ಲವೂ ಸಲೀಸಾಗಿ ನಡೆಯಲಿದೆ ಎಂದರು. ಜಿಲ್ಲೆಯಲ್ಲಿ ೧೭,೪೫೩ ಎಕರೆ ಒತ್ತುವರಿಯಾಗಿದೆ ಇದನ್ನು ತೆರವು ಗೊಳಿಸಲು ಕ್ರಮವಹಿಸಿದರೆ ಈ ಕಾರ್ಯಗಾರಕ್ಕೆ ಒಂದು ಅರ್ಥ ಬರುತ್ತದೆ ಎಂದರು.
ಜಿಲ್ಲಾಧಿಕಾರಿ ಸಿ ಸತ್ಯಭಾಮ ಮಾತನಾಡಿ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚರವಹಿಸಿ ಹಿಂದೆ ಆಗಿರುವ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಾನೂನು ತಿಳುವಳಿಕೆ ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮದಲ್ಲದ ವಸ್ತುವಿಗೆ ಆಸೆ ಪಡುತ್ತಿರುವುದರಿಂದ ಜನರಲ್ಲಿ ಆತ್ಮೀಯತೆ ಕಾಣೆಯಾಗುತ್ತಿದೆ ಇದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಎಷ್ಟೇ ಕಾನೂನುಗಳಿದ್ದರೂ ನೈತಿಕವಾಗಿ ಶ್ರೀಮಂತರಾಗಿ ಕೆಲಸ ಮಾಡದಿದ್ದರೆ ಪ್ರಯೋಜನವಾಗುವುದಿಲ್ಲ ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ನೈತಿಕತೆ ಬೆಳೆಸಿಕೊಳ್ಳಿ ಎಂದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಕೆ. ಹೆಚ್. ಅಶ್ವಥ್ನಾರಾಯಣಗೌಡ ಮಾತನಾಡಿ, ಹಲವಾರು ಕಾನೂನುಗಳಿದ್ದರು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಜಾಗ ದೊರಕುತ್ತಿಲ್ಲ. ಒತ್ತುವರಿಯಿಂದಾಗಿ ಅರಣ್ಯ ಭೂಮಿ ಕಡಿಮೆಯಾಗುತ್ತಿದೆ. ಕಾನೂನುಬದ್ದವಾಗಿ ಕೆಲಸ ಮಾಡಬೇಕು ಎಂದರಲ್ಲದೆ, ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಸರ್ಕಾರದ ಆಸ್ತಿ ಸಂರಕ್ಷಣೆ ಮಾಡಬೇಕು ಎಂಬ ಭಾವನೆಯಿಂದ ಆಸಕ್ತಿವಹಿಸಿ ಗ್ರಾಮಲೆಕ್ಕಾಧಿಕಾರಿಯಿಂದ ಜಿಲ್ಲಾಧಿಕಾರಿಯವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿವರೆಗೆ ಕೆಲಸ ಅಚ್ಚುಕಟ್ಟಾಗಿ ಮಾಡುವುದರ ಮೂಲಕ ಸರ್ಕಾರಿ ಭೂಮಿ ರಕ್ಷಣೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಆರ್ ಪೂರ್ಣಿಮಾ ಮಾತನಾಡಿ ಇದೊಂದು ಅರ್ಥಪೂರ್ಣವಾದ ಕಾರ್ಯಾಗಾರವಾಗಿದ್ದು, ಅಧಿಕಾರಿಗಳು ಸರ್ಕಾರದ ಆಸ್ತಿಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಒತ್ತುವರಿ ತೆರವುಗೊಳಿಸಲು ನೆರವಾಗಲಿದೆ. ತಾವು ಪಾಂಡುಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಒತ್ತುವರಿ ತೆರವುಗೊಳಿಸಿದ ಸಂಗತಿ ಹಾಗೂ ಮುಜರಾಯಿ ಆಸ್ತಿ ಪತ್ತೆಹಚ್ಚಿ ಸರ್ಕಾರದ ವಶಕ್ಕೆ ಪಡೆದು ಸಂರಕ್ಷಣೆ ಮಾಡಿದ ಅನುಭವಗಳನ್ನು ತಿಳಿಸಿದ ಅವರು, ಸರ್ಕಾರದ ಆಸ್ತಿಗಳನ್ನು ಗುರುತಿಸಿ ಉಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಯಾವುದೇ ದೂರುಗಳು ಬರದಿದ್ದರು ಸಹ ಖುದ್ದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಮುಜರಾಯಿ ದೇವಾಲಯಗಳ ಆಸ್ತಿಗಳ ಬಗ್ಗೆ ಗಮನಹರಿಸಿ ಪತ್ತೆಹಚ್ಚಿ ಸಂರಕ್ಷಿಸಿ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಪಾಲಯ್ಯ ಪಾಟೀಲ ನಾಗಲಿಂಗನಗೌಡ, ಅಪರ ನಿರ್ದೇಶಕರಾದ ಎ.ಜಯಪ್ರಕಾಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ ರವಿಕಾಂತ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿ ಹೆಚ್.ಕೆ.ನವೀನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.