ಹೊಸದಿಂತ ವರದಿ,ಮಂಡ್ಯ :
ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿ ಆದಾಗ ಸಿಗುವ ಹೆಚ್ಚುವರಿ ನೀರು ಬಳಸಿಕೊಳ್ಳಲು ನ್ಯಾಯಾಧಿಕರಣದಲ್ಲಿ ಪರಿಹಾರ ಸಿಗದ ಹಿನ್ನಲೆ ಹಾಗೂ ಸಂಕಷ್ಟ ಕಾಲದಲ್ಲಿ ನೀರು ನಿರ್ವಹಣೆ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ನಿವೃತ್ತ ಇಂಜಿನಿಯರ್,ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ತಿಳಿಸಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹೆಚ್ಚುವರಿ ನೀರು ಬಳಕೆ ವಿಚಾರದಲ್ಲಿ ಕರ್ನಾಟಕ ಅರ್ಜಿ ಸಲ್ಲಿಸಲು ಮುಂದಾಗಿತ್ತು ಅಷ್ಟರಲ್ಲಿ ಕಾವೇರಿ ನ್ಯಾಯಾಧಿಕರಣ ರದ್ದಾಗಿದ್ದರಿಂದ ಈ ವಿಚಾರದಲ್ಲಿ ಪರಿಹಾರ ದೊರಕಲಿಲ್ಲ ಎಂದರು.
ಅದೇ ರೀತಿ ಸಂಕಷ್ಟ ಎದುರಾದ ಸನ್ನಿವೇಶದಲ್ಲಿ ನೀರು ನಿರ್ವಹಣೆ ಕುರಿತು ಯಾವುದೇ ಆದೇಶ ಇಲ್ಲದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವ ವಾಗುತ್ತಿದೆ, ನ್ಯಾಯಾಧೀಕರಣದ ತೀರ್ಪಿನಲ್ಲಿ ಕೆ ಆರ್ ಎಸ್ ನಿಂದ 52 ಟಿಎಂಸಿ, ಕಬಿನಿಯಿಂದ 60, ಹಾಗೂ ಜಲಾಶಯಗಳ ಮುಂಭಾಗದ ಪ್ರದೇಶದಿಂದ ಮಳೆಯಾಶ್ರಿತ ನೀರು 80 ಟಿಎಂಸಿ ಬಿಡಬೇಕಾಗಿದೆ, ಮಳೆ ಕೊರತೆ ಯಾದಾಗಲೂ ಜಲಾಶಯಗಳಿಂದ ನೀರು ಬಿಡಿ ಎಂದು ತಮಿಳುನಾಡು ಒತ್ತಡ ಹಾಕುತ್ತಿದೆ ಎಂದು ಹೇಳಿದರು.
ನ್ಯಾಯಾಧೀಕರಣದ ತೀರ್ಪಿನಲ್ಲಿ ಕರ್ನಾಟಕ ಎಷ್ಟು ಪ್ರದೇಶದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು ಎಂದು ನಿಗದಿ ಮಾಡಿದ್ದು,ಕುಡಿಯುವ ನೀರಿಗೂ ಹಂಚಿಕೆ ಮಾಡಲಾಗಿದೆ, ಸಂಕಷ್ಟ ಸಮಯದಲ್ಲಿ ಕರ್ನಾಟಕ ಇದರ ಜವಾಬ್ದಾರಿ ನಿರ್ವಹಣೆ ಮಾಡಬೇಕಲ್ಲವೇ ಅದೇ ರೀತಿ ಅಂತರ್ಜಲದ 10 ಟಿಎಂಸಿ ನೀರನ್ನು ತಮಿಳುನಾಡು ಬಳಕೆ ಮಾಡಿಕೊಳ್ಳಲು ಅವಕಾಶವಿದೆ, ಇದನ್ನು ಜೂನ್,ಜುಲೈ ತಿಂಗಳಿನಲ್ಲಿ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರೆ ಸಮಸ್ಯೆ ಎದುರಾಗುವುದಿಲ್ಲ, ಅಷ್ಟೇ ಅಲ್ಲದೆ ಹಿಂಗಾರು ಮಳೆ ನೀರು ಸಂಗ್ರಹಕ್ಕೆ ಯಾವುದೇ ಯೋಜನೆ ರೂಪಿಸದೆ ಕರ್ನಾಟಕದ ಮೇಲೆ ಒತ್ತಡ ಹಾಕುವ ಬಗ್ಗೆ ನೀರು ಬಿಡಿ ಎಂದು ಆದೇಶ ಮಾಡುವವರನ್ನು ಪ್ರಶ್ನಿಸಬೇಕಾಗಿದೆ ಎಂದರು.
ಹೆಚ್ಚುವರಿ ನೀರು ಬಳಕೆಗೆ ಅವಕಾಶ ಸಿಕ್ಕಿದ್ದರೆ ಮೇಕೆದಾಟು ಯೋಜನೆ ಸಾಕಾರಗೊಳ್ಳುತ್ತಿತ್ತು, ಬ್ರಿಟಿಷರ ಕಾಲದಲ್ಲಿ ಒಪ್ಪಿಗೆಯಾಗಿರುವ ಯೋಜನೆಗೆ ತಮಿಳುನಾಡು ಸ್ವಾರ್ಥದಿಂದ ಅಡ್ಡಗಾಲಾಗುತ್ತಿದೆ, ಕಾವೇರಿ ಕೊಳ್ಳ ಪ್ರದೇಶದ ಜಲಾಶಯಗಳ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದ್ದು,ಆ ನೀರು ಸಮುದ್ರಕ್ಕೆ ಹರಿದು ಫೋಲಾಗದಂತೆ ತಡೆಯಲು ಕಟ್ಟಿವೈ, ಗುಂಡಾಲ್ ಹಾಗೂ ವೈಗೈ ನದಿಗೆ ಹರಿಸುವ ಯೋಜನೆಯನ್ನು ಆರಂಭಿಸಿದ್ದು ಆ ಮೂಲಕ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಹಾಗಾಗಿ ಮೇಕೆದಾಟು ಯೋಜನೆಗೆ ಅಡ್ಡಿ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಸೂಕ್ಷ್ಮತೆಯಿಂದ ಹೆಜ್ಜೆ ಇರಿಸಬೇಕಾಗಿದೆ, 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಅನುಮತಿ ಸಿಗುವುದು ಕಷ್ಟವಾಗಬಹುದು ಹಾಗಾಗಿ ಪರಿಸರಕ್ಕೆ ಹಾನಿಯಾಗದಂತೆ ಶಿವನ ಸಮುದ್ರಂ, ಮೇಕೆದಾಟು ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗ ಬೇಕಿದೆ ಎಂದು ಸಲಹೆ ನೀಡಿದರು.