Thursday, December 25, 2025

ಇಂದು ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ, ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಡಿಸೆಂಬರ್ 25ರಂದು ಮಧ್ಯಾಹ್ನ 12.00ರಿಂದ 12.15 ಗಂಟೆಯ ಶುಭ ಮೂಹರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಕಳೆದ ವರ್ಷ 1.50 ಲಕ್ಷದವರೆಗೂ ಭಕ್ತಾದಿಗಳು ಭಾಗಿಯಾಗಿದ್ದರು. ಈ ಬಾರಿ ಬ್ರಹ್ಮರಥೋತ್ಸವವು ರಜೆ ದಿನ ಬಂದಿರುವುದರಿಂದ ಸುಮಾರು ಎರಡು ಲಕ್ಷ ಭಕ್ತಾದಿಗಳು ಬರುವ ಸಾಧ್ಯತೆ ಇದೆ. ಟ್ರಾಫಿಕ್ ಸಮಸ್ಯೆ, ಜನಸಂದಣಿ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ.

ಘಾಟಿ ಕ್ಷೇತ್ರಕ್ಕೆ ಆಗಮಿಸಲು ಪ್ರಮುಖವಾಗಿ ಎರಡು ರಸ್ತೆ ಸಂಪರ್ಕಗಳಿದ್ದು, ಮಾಕಳಿ ಹಾಗೂ ಕಂಟನಕುಂಟೆ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ, ಫುಟ್​ಪಾತ್ ಒತ್ತುವರಿ ತೆರವು ಮಾಡಲಾಗಿದೆ. ಇಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ದೇವಾಲಯ ಸುತ್ತಮುತ್ತಲಿನ ಫುಟ್​ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಲಾಗಿದ್ದು, ಭಕ್ತರ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಥೋತ್ಸವಕ್ಕೆ ಬರುವ ಭಕ್ತಾದಿಗಳ ವಾಹನಗಳಿಗೆ ಕಂಟನಕುಂಟೆ ಮಾರ್ಗ ಹಾಗೂ ಮಾಕಳಿ ಮಾರ್ಗದ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಭಕ್ತಾದಿಗಳು ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಪಾರ್ಕಿಂಗ್ ಸ್ಥಳದಿಂದ ದೇವಾಲಯದ ಬಳಿಗೆ ತೆರಳಲು ಜಿಲ್ಲಾಡಳಿತದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಆ ಬಸ್​ಗಳ ಮೂಲಕವೇ ಬಂದು ದರ್ಶನ ಪಡೆದು ಮತ್ತೇ ಅದೇ ಬಸ್​​ಗಳ ಮೂಲಕ ಮರಳಬಹುದು. ದೇವಾಲಯದ ಬಳಿ ವಾಹನ ಸಂಚಾರ ದಟ್ಟಣೆ, ಸಂಚಾರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

error: Content is protected !!