Thursday, December 25, 2025

ಬಾಂಗ್ಲಾದಲ್ಲಿ ‘ರೆಹಮಾನ್’ ಅಲೆ: 17 ವರ್ಷಗಳ ವನವಾಸ ಮುಗಿಸಿ ತಾಯ್ನಾಡಿಗೆ ಮರಳಿದ ಬಿಎನ್‌ಪಿ ಸಾರಥಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 17 ವರ್ಷಗಳ ಕಾಲ ಸ್ವಯಂ ಗಡಿಪಾರು ಅನುಭವಿಸಿದ್ದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಅಂತಿಮವಾಗಿ ತಾಯ್ನಾಡಿಗೆ ಮರಳಿದ್ದಾರೆ. ರೆಹಮಾನ್ ಅವರ ಆಗಮನವು ದೇಶದಾದ್ಯಂತ ಸಂಚಲನ ಮೂಡಿಸಿದ್ದು, ವಿಮಾನ ನಿಲ್ದಾಣದಿಂದ ಸ್ವಾಗತ ಕೋರುವ ಸ್ಥಳದವರೆಗೆ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು.

ತಾರಿಕ್ ರೆಹಮಾನ್ ಅವರು ತಮ್ಮ ಇಬ್ಬರು ಆಪ್ತ ಸಹಾಯಕರಾದ ಅಬ್ದುರ್ ರೆಹಮಾನ್ ಸುನಿ ಮತ್ತು ಕಮಲ್ ಉದ್ದೀನ್ ಅವರೊಂದಿಗೆ ಆಗಮಿಸಿದರು. ವಿಶೇಷವೆಂದರೆ, ಅವರ ಪ್ರೀತಿಯ ಸಾಕು ಬೆಕ್ಕು ‘ಜೀಬು’ ಕೂಡ ಅವರ ಜೊತೆಯಲ್ಲೇ ಪ್ರಯಾಣ ಬೆಳೆಸಿದೆ. ವಿಮಾನ ನಿಲ್ದಾಣದಲ್ಲಿ ಪಕ್ಷದ ಸ್ಥಾಯಿ ಸಮಿತಿ ಸದಸ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿರುವ ರೆಹಮಾನ್, ಮುಂಬರುವ ಫೆಬ್ರವರಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಅತ್ಯಂತ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಭದ್ರತೆ ನೀಡಲು ವಿಶೇಷವಾಗಿ ಆಮದು ಮಾಡಿಕೊಂಡ ಬುಲೆಟ್‌ ಪ್ರೂಫ್‌ ವಾಹನಗಳನ್ನು ಬಳಸಲಾಗುತ್ತಿದ್ದು, ಹಾದಿಯುದ್ದಕ್ಕೂ ಲಕ್ಷಾಂತರ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಹೂಮಳೆ ಗರೆದರು.

ಕಾರ್ಯಕ್ರಮದ ಮುಖ್ಯಾಂಶಗಳು:

ಸ್ವಾಗತ ಸಮಾರಂಭದಲ್ಲಿ ಸುಮಾರು 50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ರೆಹಮಾನ್ ಅವರು ಜನಸಮೂಹವನ್ನು ಉದ್ದೇಶಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ.

ಭಾಷಣದ ನಂತರ ರೆಹಮಾನ್ ಅವರು ಎವರ್‌ಕೇರ್ ಆಸ್ಪತ್ರೆಗೆ ತೆರಳಿ, ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿ ಖಲೀದಾ ಜಿಯಾ ಅವರ ಆರೋಗ್ಯ ವಿಚಾರಿಸಲಿದ್ದಾರೆ.

ಇತ್ತೀಚೆಗೆ ನಡೆದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಬಿನ್ ಹಾದಿ ಹತ್ಯೆ ಮತ್ತು ದೇಶದಲ್ಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಢಾಕಾ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ತಾರಿಕ್ ರೆಹಮಾನ್ ಅವರ ಈ ಆಗಮನವು ಬಾಂಗ್ಲಾದೇಶದ ಮುಂಬರುವ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

error: Content is protected !!