ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನೇರವಾದ ಮಾತುಗಳನ್ನಾಡಿದ್ದಾರೆ. ಪಕ್ಷದ ಆಂತರಿಕ ಗೊಂದಲಗಳು ಹೀಗೆಯೇ ಮುಂದುವರಿದರೆ ಮುಂಬರುವ ಚುನಾವಣೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯ ಘಟಕದ ಕಚ್ಚಾಟವನ್ನು ದೆಹಲಿ ನಾಯಕರು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಭವಿಷ್ಯದಲ್ಲಿ ಹಿನ್ನಡೆಯಾಗುವುದು ಖಚಿತ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, “ಅವರಿಬ್ಬರೇ ಕುಳಿತು ಮಾತನಾಡಬೇಕು, ಮೂರನೆಯವರಿಗೆ ಅಲ್ಲಿ ಅವಕಾಶ ಇರಬಾರದು” ಎಂದು ಕಿವಿಮಾತು ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ವಿರೋಧ ಪಕ್ಷಗಳು ಈಗಿನಿಂದಲೇ ಹೊಸ ಪ್ರಯೋಗಗಳನ್ನು ಮಾಡುತ್ತಿವೆ, ನಾವು ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಆಗಿರೋದು ಆಗಿ ಹೋಗಿದೆ, ಇನ್ನು ಮುಂದಿನ ಬಗ್ಗೆ ಯೋಚಿಸಬೇಕು” ಎಂದಿದ್ದಾರೆ.

