ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಸದ್ಯ ಸಿನಿಮಾ ಮತ್ತು ರಾಜಕೀಯ ಎಂಬ ಎರಡು ದೋಣಿಗಳ ಮೇಲೆ ಪಯಣಿಸುತ್ತಿದ್ದಾರೆ. ಅವರ ಬಹುನಿರೀಕ್ಷಿತ ಹಾಗೂ ವೃತ್ತಿಜೀವನದ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ, ಈ ಚಿತ್ರದ ಅದ್ಧೂರಿ ಪ್ರಚಾರ ಕಾರ್ಯಕ್ಕೆ ವಿದೇಶಿ ಮಣ್ಣಿನಲ್ಲಿ ವಿಘ್ನವೊಂದು ಎದುರಾಗಿದೆ.
ವಿಜಯ್ ಅವರಿಗೆ ತಮಿಳುನಾಡಿನ ಹೊರಗೆ ಅತಿ ಹೆಚ್ಚು ಅಭಿಮಾನಿಗಳಿರುವುದು ಮಲೇಷ್ಯಾದಲ್ಲಿ. ಹೀಗಾಗಿ ಚಿತ್ರತಂಡ ಅಲ್ಲಿನ ಕೌಲಾಲಂಪುರದಲ್ಲಿ ಅದ್ಧೂರಿ ಆಡಿಯೋ ಲಾಂಚ್ ಹಮ್ಮಿಕೊಂಡಿದೆ. ಆದರೆ ಅಲ್ಲಿನ ಸ್ಥಳೀಯ ಪೊಲೀಸರು ವಿಜಯ್ಗೆ ಕಠಿಣ ನಿಯಮಗಳನ್ನು ವಿಧಿಸಿದ್ದಾರೆ.
ಇದು ಕೇವಲ ಮನರಂಜನಾ ಕಾರ್ಯಕ್ರಮವಾಗಿದ್ದು, ಯಾವುದೇ ಕಾರಣಕ್ಕೂ ರಾಜಕೀಯ ಭಾಷಣ ಅಥವಾ ರಾಜಕೀಯ ಪ್ರಚಾರ ಮಾಡುವಂತಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳ ಸಂಖ್ಯೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ರಾಜಕೀಯ ಅಜೆಂಡಾ ಪ್ರಚಾರಕ್ಕೆ ಈ ವೇದಿಕೆಯನ್ನು ಬಳಸದಂತೆ ಸೂಚನೆ ನೀಡಲಾಗಿದೆ.
ಈ ಸಿನಿಮಾ ವಿಜಯ್ ಅವರ ಸಿನಿ ಪಯಣದ ಅಂತಿಮ ಅಧ್ಯಾಯ ಎಂದು ಹೇಳಲಾಗುತ್ತಿದೆ. ಇದರ ನಂತರ ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಲಿದ್ದಾರೆ.

