ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು 17 ವರ್ಷಗಳ ಸುದೀರ್ಘ ವನವಾಸದ ನಂತರ ಬಾಂಗ್ಲಾದೇಶಕ್ಕೆ ಮರಳಿರುವ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್, ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಸರ್ವಧರ್ಮೀಯರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.
ಗುರುವಾರ ಢಾಕಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ರೋಡ್ ಶೋನಲ್ಲಿ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ರಾಜಕೀಯ ಸಿದ್ಧಾಂತಗಳು ಅಥವಾ ಧರ್ಮಗಳು ಯಾವುದಾದರೂ ಇರಲಿ, ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಒಂದಾಗಬೇಕು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರು ಸೌಹಾರ್ದತೆಯಿಂದ ಬಾಳುವ ಮೂಲಕ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು” ಎಂದು ಆಶಿಸಿದರು.
ಕಳೆದ ವರ್ಷ ಶೇಖ್ ಹಸೀನಾ ಸರ್ಕಾರ ಪತನಗೊಳ್ಳಲು ಪ್ರಮುಖ ಕಾರಣಕರ್ತರಾಗಿದ್ದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶ ತೀವ್ರ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಈ ಕಠಿಣ ಸಂದರ್ಭದಲ್ಲಿ ದೇಶಕ್ಕೆ ಮರಳಿರುವ ತಾರಿಕ್ ರೆಹಮಾನ್, ಪ್ರಧಾನಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾದ ರೆಹಮಾನ್ ಅವರ ಆಗಮನವು ಬಾಂಗ್ಲಾದೇಶದ ರಾಜಕೀಯ ಸಮೀಕರಣಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಿದರೆ ಮಾತ್ರ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

