ಹೊಸದಿಗಂತ ಬೀದರ್
ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ವಿರೋಧಿಸುವವರ ಧ್ವನಿ ಅಡಗಿಸಲು ‘ದ್ವೇಷ ಭಾಷಣ ತಡೆ ಕಾಯ್ದೆ’ಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದ್ದು, ಸಚಿವ ಸಂಪುಟದಲ್ಲಿ ಕೇವಲ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ‘ಕುರ್ಚಿ ಸಮರ’ ಹಾಗೂ ಜಿ. ಪರಮೇಶ್ವರ್ ಮತ್ತು ಖರ್ಗೆ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿರುವುದು ಆಡಳಿತ ಯಂತ್ರದ ಹಳಿ ತಪ್ಪುವಿಕೆಗೆ ಸಾಕ್ಷಿಯಾಗಿದೆ. ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ. ಬೆಳಗಾವಿ ಅಧಿವೇಶನವು ಉತ್ತರ ಕರ್ನಾಟಕದ ಅಭಿವೃದ್ಧಿ ಚರ್ಚಿಸುವ ಬದಲು ದ್ವೇಷ ಭಾಷಣದಂತಹ ವಿಷಯಾಂತರಗಳಲ್ಲಿಯೇ ವ್ಯರ್ಥವಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

