ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋವಿನ ಪ್ರಮುಖ ಯೋಜನೆಯಾದ ಆದಿತ್ಯ ಎಲ್ 1 ಯೋಜನೆ ಜನವರಿ ತಿಂಗಳ ಮಧ್ಯದಲ್ಲಿ ಲಾಂಗ್ರೇಜ್ ಪಾಯಿಂಟ್ನ್ನು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಭೂಮಿಯಿಂದ ಈಗಾಗಲೇ ಎಲ್1 ಪಾಯಿಂಟ್ ಕಡೆಗೆ ಚಲಿಸುತ್ತಿರುವ ಆದಿತ್ಯ ಎಲ್ 1 ನೌಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನೌಕೆಯು ಎಲ್ 1 ಪಾಯಿಂಟ್ ತಲುಪಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜನವರಿ ತಿಂಗಳ ಮಧ್ಯ ಭಾಗದಲ್ಲಿ ನೌಕೆಯು ಎಲ್ 1 ಪಾಯಿಂಟ್ ತಲುಪುತ್ತದೆ. ಬಳಿಕ ನೌಕೆಯನ್ನು ಲಾಂಗ್ರೇಜ್ ಪಾಯಿಂಟ್ಗೆ ಸೇರಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಹಾಲೋ ಆರ್ಬಿಟ್ ಎಂದು ಕರೆಯುತ್ತೇವೆ. ಇದು ದೊಡ್ಡ ಆರ್ಬಿಟ್ ಆಗಿದೆ ಎಂದು ತಿಳಿಸಿದರು.
ಈಗಾಗಲೇ ಚಂದ್ರಯಾನ ಮೂಲಕ ಭಾರತವು ಹೊಸ ಮೈಲಿಗಲ್ಲು ಸಾಧಿಸಿದೆ. ಇದರ ಬೆನ್ನಲ್ಲೇ ಭಾರತದ ಮೊದಲ ಸೂರ್ಯಯಾನವನ್ನು ಇಸ್ರೋ ವಿಜ್ಞಾನಿಗಳು ಕೈಗೊಂಡಿದ್ದಾರೆ. ಕಳೆದ ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್ 1 ನೌಕೆಯನ್ನು ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಈ ನೌಕೆಯು 7 ವಿವಿಧ ಪೇಲೋಡ್ಗಳನ್ನು ಹೊತ್ತೊಯ್ದಿದ್ದು, ಸೂರ್ಯನ ವಿಸ್ತೃತ ಅಧ್ಯಯನ ನಡೆಸಲಿದೆ. 7 ಪೇಲೋಡ್ಗಳಲ್ಲಿ 4 ಸೂರ್ಯನ ಕಿರಣಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ಇತರ 3 ಪೇಲೋಡ್ಗಳು ಸೂರ್ಯ ಮೇಲ್ಮೈ ಬಗ್ಗೆ ಅಧ್ಯಯನ ನಡೆಸಲಿದೆ.