ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಇಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ಥಾನ ಉತ್ತಮ ಪ್ರದರ್ಶನ ನೀಡಿದೆ .
ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ಪ್ರದರ್ಶನದಿಂದ ಅಫ್ಘಾನ್ ತಂಡ 284 ರನ್ ಕಲೆಹಾಕಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತಾದರೂ, ಮಧ್ಯಮ ಕ್ರಮಾಂಕದ ವೈಫಲ್ಯ ಕಂಡು ಬಂತು.
ಅಫ್ಘಾನಿಸ್ತಾನದಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ನೀಡಿದರು.
ಗುರ್ಬಾಜ್ ಒಂದೆಡೆ ಅಬ್ಬರದ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರೆ, ಜದ್ರಾನ್ ಸಾಥ್ ನೀಡಿದರು.114 ರನ್ಗಳ ಜೊತೆಯಾಡುತ್ತಿದ್ದಾಗ ಜದ್ರಾನ್ (28) ವಿಕೆಟ್ ಪಡೆದು ಜೊತೆಯಾಟವನ್ನು ಆದಿಲ್ ರಶೀದ್ ಬ್ರೇಕ್ ಮಾಡಿದರು. ಜದ್ರಾನ್ ಬೆನ್ನಲ್ಲೇ ರಹಮತ್ ಶಾ (3) ಸಹ ಆದಿಲ್ ರಶೀದ್ಗೆ ವಿಕೆಟ್ ಕೊಟ್ಟರು.
80 ರನ್ ಗಳಿಸಿ ಆಡುತ್ತಿದ್ದ ಗುರ್ಬಾಜ್ ರನ್ ಔಟ್ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಗಳಿಸಿದ್ದರು. ಗುರ್ಬಾಜ್ ಔಟ್ ಬಳಿಕ ಹಶ್ಮತುಲ್ಲಾ ಶಾಹಿದಿ (14), ಅಜ್ಮತುಲ್ಲಾ ಒಮರ್ಜಾಯ್ (19) ಮತ್ತು ಮೊಹಮ್ಮದ್ ನಬಿ (9) ವಿಕೆಟ್ ಉರುಳಿತು.
ಇಕ್ರಮ್ ಅಲಿಖಿಲ್ ಮತ್ತು ಆಲ್ರೌಂಡರ್ ರಶೀದ್ ಖಾನ್ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಆಸರೆ ಆದರು. ಇದರಿಂದ ಅಫ್ಘಾನಿಸ್ತಾನ 250ರ ಗಡಿ ದಾಟಿತು. ರಶೀದ್ ಖಾನ್ (23), ಮುಜೀಬ್ ಉರ್ ರಹಮಾನ್ (28) ತಂಡಕ್ಕೆ ಕೊನೆಯಲ್ಲಿ ರನ್ ಗಳಿಸಿದ್ದು 300ರ ಸಮೀಪಕ್ಕೆ ಗುರಿಯನ್ನು ಕೊಂಡೊಯ್ಯಿತು.