ಹೊಸದಿಗಂತ ವರದಿ, ಭಟ್ಕಳ :
ತಾಲ್ಲೂಕಿನ ಮಾವಿನಕುರ್ವೆ ಬಂದರಿನಲ್ಲಿ ಲಂಗರು ಹಾಕಿದ್ದ ದೋಣಿಯೊಂದಕ್ಕೆ ಭಾನುವಾರ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ದೋಣಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಮಾವಿನಕುರ್ವೆ ಬಂದರಿನ ನಿವಾಸಿ ಗೋವಿಂದ ನರಸಿಂಹ ಖಾರ್ವಿ ಅವರ ಮಾಲೀಕತ್ವದ ಎಂಜಿಲಾ ಎನ್ನುವ ಹೆಸರಿನ ದೋಣಿಯೇ ಬೆಂಕಿಗೆ ಸುಟ್ಟು ಹೋಗಿದೆ. ಗೋವಿಂದ ಖಾರ್ವಿ ಅವರು ಎಂಜಿಲಾ ದೋಣಿಯನ್ನು ದೋಣಿವಿಹಾರ ನಡೆಸುವ ಪ್ರಯುಕ್ತ ಖರೀದಿ ಮಾಡಿ ರಿಪೇರಿಗಾಗಿ ಬಂದರಿನ ದಡದಲ್ಲಿ ಲಂಗುರು ಹಾಕಿದ್ದರು. ಪ್ರವಾಸೋದ್ಯಮದಡಿ ವಾಯುವಿಹಾರದ ದೋಣಿಯನ್ನಾಗಿ ಮಾರ್ಪಾಡಿಸಲು ಅಂದಾಜು ಮೂರು ಲಕ್ಷ ಮೌಲ್ಯದ ಸಾಮಗ್ರಿಗಳನ್ನು ದೋಣಿಯಲ್ಲಿ ಇಟ್ಟಿದ್ದರು. ಭಾನುವಾರ ಇದ್ದಕ್ಕಿದ್ದಂತೆ ದೋಣಿಗೆ ಬೆಂಕಿ ತಗುಲಿದ್ದು ದೋಣಿ ಸಹಿತ ದೋಣಿಯಲ್ಲಿದ್ದ ಸಾಮಗ್ರಿ ಸುಟ್ಟು ಭಸ್ಮವಾಗಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ. ಬೆಂಗಿ ತಗುಲಿ ೭ ಲಕ್ಷ ರೂಪಾಯಿ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.