ಎರಡು ಕುಟುಂಬಗಳ ನಡುವೆ ಮಾರಾಮಾರಿ, ಚಾಕು ಇರಿತ

ಹೊಸದಿಗಂತ ವರದಿ ಮುಂಡಗೋಡ:

ಜಾಗದ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಒಬ್ಬರಿಗೊಬ್ಬರು ಚಾಕುವಿನಿಂದ ಇರಿದ ಘಟನೆ ಪಟ್ಟಣ ಇಂದಿರಾನಗರದಲ್ಲಿ ಭಾನುವಾರ ರಾತ್ರಿ ಜರುಗಿದೆ.

ಈ ಘಟನೆಯಲ್ಲಿ ಹಸನಖಾನ್ ಕಾಶಿಮಸಾಬ್ ಪಠಾಣ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ.

ಪಟ್ಟಣದ ಅಳಿಯಂದಿರ ಓಣೆಯಲ್ಲಿರುವ ಪಠಾಣ ಹಾಗೂ ಟಪಾಲ ಎಂಬ ಎರಡು ಕುಟುಂಬಗಳ ನಡುವೆ
ಮನೆಯ ಜಾಗದ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಸ್ಥಳಿಯ ಮುಸ್ಲೀಂ ಜಮಾತನ ಮುಖಂಡರು ಸಭೆ ಸೇರಿ ನಿರ್ಣಯ ಮಾಡಿದ್ದರು. ಆದರೆ ಸಮಸ್ಯೆ ಬಗೆ ಹರಿಯದೆ ಪದೇ ಪದೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿತ್ತು. ಅಲ್ಲದೆ ಭಾನುವಾರ ರಾತ್ರಿ ಜಮಾತಿನ ಮುಖ್ಯಸ್ಥರು ಸಭೆ ಸೇರಿ ನಿರ್ಣಯ ನೀಡಲು ಎರಡು ಕುಟುಂಬದವರನ್ನು ಕರೆದಿದ್ದರು.

ಆದರೆ ಈ ನಡುವೆಯೇ ಎರಡು ಕುಟುಂಬದವರ ನಡುವಿನ ಜಗಳ ತಾರಕಕ್ಕೇರಿದ್ದು, ಚಾಕುವಿನಿಂದ ಹಲ್ಲೆ ನಡೆದಿದೆ. ಯಾರು, ಯಾವಾಗ, ಏಕೆ ಚಾಕುವಿನಿಂದ ಹಲ್ಲೆ ಮಾಡಿದರು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಘಟನಾ ಸ್ಥಳಕ್ಕೆ ಹಾಗೂ ತಾಲೂಕು ಆಸ್ಪತ್ರೆಗೆ ಸಿಪಿಐ ಬಿ.ಎಸ್ ಲೋಕಾಪೂರ ಹಾಗೂ ಪಿಎಸ್ಐ ಯಲ್ಲಾಲಿಂಗ ಕುನ್ನೂರ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು ಪರಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದವರನ್ನು  ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!