ಹೊಸದಿಗಂತ ವರದಿ ಸಕಲೇಶಪುರ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಅವರು ಧರ್ಮಸ್ಥಳ, ಸುಬ್ರಮಣ್ಯ ಮತ್ತಿತರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ವಾಪಸ್ಸಾಗುವಾಗ ಸಕಲೇಶಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಭೇಟಿ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಹಾಸನದ ಲೋಕಸಭಾ ಅಭ್ಯರ್ಥಿ ಕುರಿತು ಇನ್ನು ಅಂತಿಮ ಆಗಿಲ್ಲ. ವಾರದ ಹಿಂದೆ ಬೆಂಗಳೂರಿನಲ್ಲಿ ಪರಾಜಿತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಮತ್ತೆ 22 ಅಕ್ಟೋಬರ್ ಇನ್ನೊಂದು ಸಭೆ ಮಾಡುತ್ತೇವೆ.
ಈ ಸಭೆಯಲ್ಲಿ ನಾನು, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಜಿಲ್ಲೆಯ ಪರಾಜಿತ
ಅಭ್ಯರ್ಥಿಗಳು, ಜಿಲ್ಲಾ ಮಟ್ಟದ ಮುಖಂಡರು, ತಾಲೂಕು ಮುಖಂಡರ ಜೊತೆ ಚರ್ಚಿಸಿ ಅಕಾಂಕ್ಷಿಗಳ ಕುರಿತು ವರದಿ ಕಳುಹಿಸುತ್ತೇವೆ. ನಮ್ಮ ವರದಿ ಆಧರಿಸಿ ವರಿಷ್ಠರು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ.
ಈ ಬಾರಿ ಹಾಸನದಲ್ಲಿ ಲೋಕಸಭಾ ಕ್ಷೇತ್ರ ಗೆಲ್ಲಬೇಕು ಎನ್ನೋದು ನಮ್ಮ ಆಸೆಯಾಗಿದೆ. ಎಲ್ಲಾ ನಾಯಕರು ಕಾರ್ಯಕರ್ತರು ಕೂಡ ಈ ಬಾರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎನ್ನೋ ಹುಮ್ಮಸ್ಸಿನಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಸಹ ಇದೆ.
ಸಹಜವಾಗಿ ಪ್ರಜಾಪ್ರಭುತ್ವದಲ್ಲಿ ಒಂದೇ ಸರ್ಕಾರ ಹತ್ತು ವರ್ಷ ಆದಮೇಲೂ ಕೂಡ ಮುಂದುವರೆದಿರೊ ಉದಾಹರಣೆ ಇಲ್ಲ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಇಷ್ಟು ದೊಡ್ಡಮಟ್ಟದ ಗೆಲುವು ಪಡೆದ ಕಾರಣ ಮತದಾರರ ಅಭಿಪ್ರಾಯ ಕಾಂಗ್ರೆಸ್ ಮೇಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಸಾವಿರಾರು ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ, ಬಿಜೆಪಿಯವರ ಕೈನಲ್ಲಿ ಇನ್‌ಕಮ್ ಟ್ಯಾಕ್ಸ್, ಇ.ಡಿ ಇವೆ. ಈಗ ಪರಿಶೀಲನೆ ಮಾಡುತ್ತಿದ್ದಾರೆ, ನಾವೇನು ಬೇಡಾ ಎನ್ನಲ್ಲ. ಬಿಜೆಪಿ ಜೆಡಿಎಸ್ ಸೇರಿಕೊಂಡು ಇದು ಕಾಂಗ್ರೆಸ್ ಎಂದಾಕ್ಷಣ ಹಾಗಾಗಲ್ಲ, ಯಾರ್ಯಾರ ದುಡ್ಡು ಏನು ಎನ್ನೋದು ತನಿಖೆ ಆಗಲಿ ಎಂದು ಮರುತ್ತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದಂತ ಮುರುಳಿ ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ ಬೈರಮುಡಿ ಚಂದ್ರು, ದೇವರಾಜ್, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.