Friday, December 26, 2025

ವಿಜಯ್ ಹಜಾರೆ ಟ್ರೋಫಿ: ಕೇರಳದ ಬೌಲಿಂಗ್ ವರ್ಸಸ್ ಕರ್ನಾಟಕದ ಬ್ಯಾಟಿಂಗ್: ಗೆಲುವು ಯಾರ ಪಾಲು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 413 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆದಿದ್ದ ಕರ್ನಾಟಕ ತಂಡ, ಈಗ ತನ್ನ ಎರಡನೇ ಪಂದ್ಯದಲ್ಲಿ ಕೇರಳವನ್ನು ಎದುರಿಸಲು ಸಜ್ಜಾಗಿದೆ. ಇಂದು ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸತತ ಎರಡನೇ ಗೆಲುವಿನ ಮೇಲೆ ಮಯಾಂಕ್ ಪಡೆ ಕಣ್ಣಿಟ್ಟಿದೆ.

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರೂ, ಕರ್ನಾಟಕದ ಬೌಲರ್‌ಗಳು ರನ್ ಬಿಟ್ಟುಕೊಡುವಲ್ಲಿ ಸ್ವಲ್ಪ ಉದಾರಿಯಾಗಿದ್ದರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಶ್ರೇಯಸ್‌ ಗೋಪಾಲ್ ಮತ್ತು ವೈಶಾಖ್‌ ವಿಜಯ್‌ಕುಮಾರ್‌ ಅಂತಹ ಅನುಭವಿಗಳು ಶಿಸ್ತಿನ ದಾಳಿ ಸಂಘಟಿಸಬೇಕಿದೆ. ಯುವ ವೇಗಿಗಳಾದ ಅಭಿಲಾಶ್‌ ಶೆಟ್ಟಿ ಮತ್ತು ವಿದ್ಯಾಧರ್‌ ಪಾಟೀಲ್‌ ಅವರಿಂದ ಸುಧಾರಿತ ಪ್ರದರ್ಶನವನ್ನು ತಂಡ ನಿರೀಕ್ಷಿಸುತ್ತಿದೆ.

ದೇವ್‌ದತ್‌ ಪಡಿಕ್ಕಲ್‌ ಭರ್ಜರಿ ಫಾರ್ಮ್‌ನಲ್ಲಿದ್ದರೆ, ನಾಯಕ ಮಯಾಂಕ್ ಅಗರ್ವಾಲ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಕರುಣ್‌ ನಾಯರ್‌, ಅಭಿನವ್‌ ಮನೋಹರ್ ಮತ್ತು ಆಲ್‌ರೌಂಡರ್ ಧೃವ್ ಪ್ರಭಾಕರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಮೊತ್ತ ತಂದುಕೊಡುವ ಭರವಸೆ ಮೂಡಿಸಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೇರಳ ತಂಡ ಸಣ್ಣ ಪುಟ್ಟ ಎದುರಾಳಿಯಲ್ಲ. ಬಾಬಾ ಅಪರಾಜಿತ್, ವಿಷ್ಣು ವಿನೋದ್ ಅವರಂತಹ ಅನುಭವಿಗಳ ದಂಡೇ ಅಲ್ಲಿಯೂ ಇದೆ. ಸಂಜು ಸ್ಯಾಮ್ಸನ್ ಆಡುವ ಬಗ್ಗೆ ಕುತೂಹಲವಿದ್ದರೂ, ಕೇರಳದ ಬೌಲಿಂಗ್ ವಿಭಾಗ ಕರ್ನಾಟಕದ ಬ್ಯಾಟರ್‌ಗಳಿಗೆ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ.

error: Content is protected !!