ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸ ಬಸ್ ನಿಲ್ದಾಣದಲ್ಲಿ ಸ್ಥಗಿತವಾಗಿದ್ದ ಕುಡಿಯುವ ನೀರಿನ ಘಟಕಗಳನ್ನು ಸಂಸ್ಥೆಯ ಅಧಿಕಾರಿಗಳು ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಅನುಕೂಲ ಮಾಡಿದ್ದಾರೆ.
ಈ ಕುರಿತು ಹೊಸದಿಗಂತ ಪತ್ರಿಕೆಯು ‘ಹೊಸ ಬಸ್ ನಿಲ್ದಾಣದಲ್ಲಿ ನೀರಿಗೆ ಪರದಾಟ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿದ್ದಾರೆ ಮತ್ತು ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಾನ್ಯರೇ,
ಹೊಸ ಬಸ್ ನಿಲ್ದಾಣ, ಗೋಕುಲ ರಸ್ತೆ ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಆರೋಪ್ಲಾಂಟ್ ಸರಿಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ. pic.twitter.com/dT5xaRTAqz— North Western Karnataka Road Transport Corporation (@nw_krtc) October 17, 2023
ಶುದ್ಧ ನೀರಿಗಾಗಿ ಬಾಟಲ್ ಹಿಡಿದು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇತ್ತು. ಈಗ ಸಮಸ್ಯೆ ಪರಿಹಾರವಾಗಿದ್ದು, ಕ್ಷಣಾರ್ಧದಲ್ಲಿ ನೀರಿನ ಬಾಟಲ್ ತುಂಬುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾರಿಗೆ ಸಂಪರ್ಕಿಸುವ ಬಸ್ ನಿಲ್ದಾಣವಾಗಿದ್ದು, ಸಾವಿರಾರು ಪ್ರಯಾಣಿಕರು ನಿತ್ಯ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಆದರೆ ಕೇವಲ ಒಂದೇ ಶುದ್ಧ ನೀರಿನ ಘಟಕವಿದೆ. ಆದ್ದರಿಂದ ಸಾರಿಗೆ ಇಲಾಖೆ ಇನ್ನೂ 2-3 ಘಟಕ ಸ್ಥಾಪಿಸಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.