ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ರಕ್ಷಣೆಗೆಂದೇ ಆರಕ್ಷಕರಿದ್ದಾರೆ. ಆದರೆ ಅವರಿಂದ ಯಾವುದೇ ರಕ್ಷಣೆ ದೊರೆತಿಲ್ಲ ಎಂದ ಮೇಲೆ ತಕ್ಕ ಶಾಸ್ತಿ ಮಾಡಲೇಬೇಕಲ್ಲ. ತನ್ನ ನೋವನ್ನು ಕೇಳದ ಪೊಲೀಸರ ವಿರುದ್ಧ ಕೆರಳಿದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಬೀಗ ಜಡಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ವಿಶಾಖಪಟ್ಟಣಂನ ಪೆಂಡುರ್ತಿಯಲ್ಲಿ ಇಂತಹ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಕಳೆದ ಐದಾರು ದಿನಗಳಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ತನ್ನ ಸಮಸ್ಯೆ ಕೇಳುವುದಿರಲಿ ಯಾರೊಬ್ಬರೂ ಆಕೆಯತ್ತ ಗಮನವೂ ಹರಿಸುತ್ತಿಲ್ಲ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟಕ್ಕೂ ಮಹಿಳೆಯ ಸಮಸ್ಯೆಯೇನು?
ಪೆಂಡುರ್ತಿ ಅಪಾರ್ಟ್‌ಮೆಂಟ್‌ನಲ್ಲಿ ಗೌತಮಿ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಬಾಡಿಗೆಗೆ ವಾಸವಾಗಿದ್ದಾರೆ. ಮಾಲೀಕರು ಮನೆ ಮಾರಾಟ ಮಾಡಲು ಮುಂದಾಗಿದ್ದಕ್ಕೆ ಆ ಮನೆಯನ್ನೇ ತಾವೇ ಕೊಂಡುಕೊಳ್ಳಲು ಸಿದ್ದರಾಗಿ ಐದು ಲಕ್ಷ ರೂ ಮುಂಗಡ ಪಾವತಿ ಕೂಡ ಮಾಡಿದ್ದಾರೆ. ಹಣ ಪಡೆದರೂ ಮನೆ ಖಾಲಿ ಮಾಡುವಂತೆ ಮಾಲೀಕನ ಕಿರುಕುಳ ಹಾಚ್ಚಾಗಿದ್ದು, ಮನೆಗೆ ಬೀಗ ಜಡಿದು ನಮ್ಮನ್ನು ಬೀದಿ ಪಾಲು ಮಾಡಿದ್ದಾರೆಂದು ಅಳಲು ತೋಡಿಕೊಂಡರು.
ಇರಲು ಮನೆಯಿಲ್ಲದೆ, ಕನಿಷ್ಠ ಬಾತ್‌ರೂಮ್ ವ್ಯವಸ್ಥೆಯಿಲ್ಲದೆ ನಾನು ನನ್ನ ಮಕ್ಕಳು ಪರದಾಡುವಂತಾಗಿದೆ. ಈ ಬಗ್ಗೆ ದೂರು ಕೊಡಲು ಬಂದರೆ ಪೊಲೀಸ್‌ನವರು ತಲೆಕೆಡಿಸಿಕೊಳ್ತಿಲ್ಲ. ಇದರಿಂದ ಬೇರೆ ದಾರಿಯಿಲ್ಲದೆ ಹೀಗೆ ಮಾಡಿದ್ದೇನೆ, ನನ್ನ ಕಷ್ಟ ಇವರಿಗೂ ಅರ್ಥವಾಗಲಿ ಎಂದರು.
ಮತ್ತೊಂದೆಡೆ ಠಾಣೆಗೆ ಬೀಗ ಜಡಿದ ಘಟನೆಯಿಂದ ತಬ್ಬಿಬ್ಬಾದ ಸಿಐ ಶ್ರೀನಿವಾಸ ರಾವ್ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.