ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯ ಅಜ್ಜವಾರ ಗೇಟ್ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ. ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರಿಗೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಜ್ಜವಾರ ಗ್ರಾಮದ ನಿವಾಸಿಗಳಾದ ಮನೋಜ್, ನರಸಿಂಹಮೂರ್ತಿ, ನಂದೀಶ್ ಹಾಗೂ ಅರುಣ್ ಮೃತಪಟ್ಟ ದುರ್ದೈವಿಗಳು.
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಹಾಗೂ ಕೂಡಲೇ ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಚಿತ್ರದುರ್ಗದ ಬಸ್ ದುರಂತದ ಬೆನ್ನಲ್ಲೇ ಸಂಭವಿಸಿದ ಈ ಸರಣಿ ಅಪಘಾತಗಳು ರಾಜ್ಯದ ಜನತೆಯಲ್ಲಿ ಮತ್ತು ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿವೆ.

