ಹೊಸದಿಗಂತ ವರದಿ,ಭಟ್ಕಳ:
ಪತಿಯೋರ್ವ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಓಡಿ ಹೋಗಲು ಯತ್ನಿಸಿದ್ದು ಪೊಲೀಸರ ಬಲೆಗೆ ಬಿದ್ದ ಘಟನೆ ಮುರ್ಡೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ನಂದಿನಿ ಲೋಕೇಶ ನಾಯ್ಕ (೩೦) ಎನ್ನುವವಳಾಗಿದ್ದಾಳೆ. ನಂದಿನಿ ಹಾಗೂ ಮುರ್ಡೇಶ್ವರದ ನಿವಾಸಿ ಲೋಕೇಶ ನಾಯ್ಕ (೩೦) ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಕಾಯ್ಕಿಣಿಯ ಸಬ್ಬತ್ತಿ ಕ್ರಾಸ್ನಲ್ಲಿ ಮನೆ ಮಾಡಿ ಮಕ್ಕಳೊಂದಿಗೆ ಉಳಿದು ಕೊಂಡಿದ್ದರು. ಪತ್ನಿಯ ಮೇಲಿನ ದ್ವೇಷದಿಂದ ಲೋಕೇಶ ಮನೆಯಲ್ಲಿದ್ದ ಪತ್ನಿಯ ಕುತ್ತಿಗೆಯನ್ನು ಸೀಳಿ ಮನೆಯಿಂದ ಪರಾರಿಯಾಗಿದ್ದ.
ಮಹಿಳೆ ಕುತ್ತಿಗೆಯಲ್ಲಿ ಆದ ಬಲವಾದ ಗಾಯದಿಂದ ತೀವ್ರ ಅಸ್ವಸ್ಥಳಾಗಿದ್ದರೂ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಳು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಮನೆಯ ಹೊರಗಡೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಸುದ್ದಿ ತಿಳಿದ ತಕ್ಷಣ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ್ದ ಗ್ರಾಮೀಣ ಸರ್ಕಲ್ ಇನ್ಸೆಕ್ಟರ್ ಸಂತೋಷ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ಕೈಗೊಂಡು ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಡಿವೈಎಸ್ಪಿ ಶ್ರೀಕಾಂತ ಕೆ. ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.