ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ. ಇಬ್ರಾಹಿಂರನ್ನು ಉಚ್ಛಾಟನೆ ಮಾಡಿದ್ದು, ಇದೀಗ ತಾತ್ಕಾಲಿಕವಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ.
ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸುದ್ದಿಗೋಷ್ಠಿ ನಡೆಸಿದ್ದು, ಪಕ್ಷದ ಜವಾಬ್ದಾರಿ ಸ್ಥಾನವನ್ನು ನಾವು ಮಾರ್ಪಾಡು ಮಾಡಬೇಕಿದೆ. ಇಬ್ರಾಹಿಂ ಹೇಳಿಕೆಗಳನ್ನು ನಾನು ಪ್ರಸ್ತಾಪಿಸೋದಿಲ್ಲ. ನಾವು ಲೋಕಸಭಾ ಚುನಾವಣೆ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ ಅಷ್ಟೆ, ಇದರಿಂದ ಜೆಡಿಎಸ್ ಸಿದ್ಧಾಂತಕ್ಕೆ ಸಮಸ್ಯೆ ಇಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆಯ ಬಳಿಕ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದು ಚಿಂತನ ಮಂಥನ ಸಭೆ ನಡೆಸಿದ್ದರು. ಈ ನಡೆಯ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ.