ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ಅನ್ನು ಪ್ರಾರಂಭಿಸುವ ಮೂಲಕ ದೇಶದ ಮೊದಲ ಇಂಟರ್ಸಿಟಿ ರ್ಯಾಪಿಡ್ ರೈಲಾದ ‘ರಾಪಿಡ್ಎಕ್ಸ್’ಗೆ (RAPIDX) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ.
ಶುಕ್ರವಾರ ಬೆಳಗ್ಗೆ 11:15ಕ್ಕೆ ದೆಹಲಿ-ಮೀರತ್ ಆರ್ಆರ್ಟಿಎಸ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬಳಿಕ ದೆಹಲಿ-ಗಾಜಿಯಾಬಾದ್-ಮೀರತ್ ಆರ್ಆರ್ಟಿಎಸ್ ಕಾರಿಡಾರ್ನ ಮೊದಲ 17 ಕಿ.ಮೀ ದೂರದ ವಿಭಾಗವನ್ನುಲೋಕಾರ್ಪಣೆಗೊಳಿಸಲಿದ್ದಾರೆ.
ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ಆರ್ಟಿಎಸ್) ಆರಂಭದ ಅಂಗವಾಗಿ ಪಿಎಂ ಮೋದಿ ಸಾಹಿಬಾಬಾದ್ನಿಂದ ದುಹೈ ಡಿಪೋಗೆ ಸಂಪರ್ಕಿಸುವ ರಾಪಿಡ್ಎಕ್ಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿವೆ. ಎನ್ಸಿಆರ್ನಲ್ಲಿ ಒಟ್ಟು 8 ಆರ್ಆರ್ಟಿಎಸ್ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಅವುಗಳಲ್ಲಿ 3 ಕಾರಿಡಾರ್ಗಳನ್ನು ಹಂತ-1 ರಲ್ಲಿ ಕಾರ್ಯಗತಗೊಳಿಸಲು ಆದ್ಯತೆ ನೀಡಲಾಗಿದೆ. ಅವುಗಳೆಂದರೆ, ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್, ದೆಹಲಿ-ಗುರುಗ್ರಾಮ-ಎಸ್ಎನ್ಬಿ-ಅಲ್ವಾರ್ ಕಾರಿಡಾರ್ ಮತ್ತು ದೆಹಲಿ-ಪಾಣಿಪತ್ ಕಾರಿಡಾರ್.
PM Sh @narendramodi Ji’s focus on urban mobility:
From BRTS to RRTS.
Rarely has the world seen such a leader who places so much importance on improving Urban Mobility for the poor and the common man.@PMOIndia pic.twitter.com/QCoyrCVq7L— Hardeep Singh Puri (@HardeepSPuri) October 19, 2023
ಎನ್ಸಿಆರ್ ಸುತ್ತಮುತ್ತಲಿನ 5 ಪಟ್ಟಣಗಳನ್ನು ಸಂಪರ್ಕಿಸುವ ದೆಹಲಿ-ಗಾಜಿಯಾಬಾದ್-ಮೀರತ್ ಆರ್ಆರ್ಟಿಎಸ್ ಕಾರಿಡಾರ್ನ ಆದ್ಯತೆಯ ವಿಭಾಗವು ಸಾಹಿಬಾಬಾದ್ ನಿಲ್ದಾಣವನ್ನು ದುಹೈ ಡಿಪೋಗೆ ಸಂಪರ್ಕಿಸುತ್ತದೆ. ಮತ್ತು ಗಾಜಿಯಾಬಾದ್, ಗುಲ್ಧರ್ ಮತ್ತು ದುಹೈ ಸೇರಿದಂತೆ 3 ಇತರ ನಿಲ್ದಾಣಗಳಲ್ಲಿಯೂ ನಿಲ್ಲುತ್ತದೆ. ಸಂಪೂರ್ಣ ಕಾರಿಡಾರ್ 82 ಕಿ.ಮೀ ಉದ್ದವಿದ್ದರೆ, ಶುಕ್ರವಾರ ಉದ್ಘಾಟನೆಗೊಳ್ಳುತ್ತಿರುವ ವಿಭಾಗ 17 ಕಿ.ಮೀ ದೂರವನ್ನು ಕ್ರಮಿಸಲಿದೆ.
ಗಂಟೆಗೆ ಸುಮಾರು 160 ಕಿ.ಮೀ ವೇಗವನ್ನು ಹೊಂದಿರುವ ಈ ಕಾರಿಡಾರ್ ದೆಹಲಿಯಿಂದ ಮೀರತ್ಗೆ ಪ್ರಯಾಣಿಸಲು 1 ಗಂಟೆ ತೆಗೆದುಕೊಳ್ಳುತ್ತದೆ. ಈ ನಡುವೆ ನಗರ ಕೇಂದ್ರಗಳಾದ ಗಾಜಿಯಾಬಾದ್, ಮುರಾದ್ನಗರ ಮತ್ತು ಮೋದಿನಗರದ ಮೂಲಕ ಹಾದುಹೋಗುತ್ತದೆ.
ವಿಶೇಷತೆಯೇನು?
ಪ್ರತಿ ರ್ಯಾಪಿಡ್ಎಕ್ಸ್ ರೈಲು ಒಂದು ಪ್ರೀಮಿಯಂ ಕೋಚ್ ಅನ್ನು ಹೊಂದಿದ್ದು, ಒರಗುವ ಆಸನಗಳು, ಕೋಟ್ ಹುಕ್ಸ್, ಮ್ಯಾಗಜೀನ್ ಹೋಲ್ಡರ್ಗಳು ಮತ್ತು ಫುಟ್ರೆಸ್ಟ್ಗಳಂತಹ ವ್ಯವಸ್ಥೆಗಳನ್ನು ಹೊಂದಿದೆ. ಈ ಕೋಚ್ಗೆ ಪ್ಲಾಟ್ಫಾರ್ಮ್ನಲ್ಲಿರುವ ಪ್ರೀಮಿಯಂ ಲಾಂಜ್ ಮೂಲಕ ಮಾತ್ರ ಪ್ರವೇಶಿಸಬಹುದು. ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕೊನೆಯ ಕೋಚ್ನಲ್ಲಿ ಗಾಲಿಕುರ್ಚಿಗಳು ಮತ್ತು ಸ್ಟ್ರೆಚರ್ಗಳನ್ನು ಇಡಲು ಸ್ಥಳವನ್ನು ಒದಗಿಸಲಾಗಿದೆ.
ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ. 2*2 ಅಡ್ಡ ಆಸನಗಳು, ವಿಶಾಲವಾದ ಸ್ಟ್ಯಾಂಡಿಂಗ್ ಸ್ಪೇಸ್, ಲಗೇಜ್ ರ್ಯಾಕ್ಗಳು, ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್ಟಾಪ್ ಅಥವಾ ಮೊಬೈಲ್ ಚಾರ್ಜಿಂಗ್ ಸೌಲಭ್ಯದಂತಹ ಫೀಚರ್ಗಳನ್ನು ಹೊಂದಿದೆ. ಡೈನಾಮಿಕ್ ರೂಟ್ ಮ್ಯಾಪ್ಗಳು, ಆಟೋ ಕಂಟ್ರೋಲ್ ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್, ಹೀಟಿಂಗ್ ವೆಂಟಿಲೇಶನ್, ಹವಾನಿಯಂತ್ರಣ ವ್ಯವಸ್ಥೆ (HVAC) ಸೇರಿದಂತೆ ಇತರ ಸೌಕರ್ಯಗಳು ಇದರಲ್ಲಿವೆ.
ಪ್ರತಿ ರ್ಯಾಪಿಡ್ಎಕ್ಸ್ ರೈಲು 6 ಕೋಚ್ಗಳನ್ನು ಹೊಂದಿದ್ದು, ಸುಮಾರು 1,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸ್ಟ್ಯಾಂಡರ್ಡ್ ಕೋಚ್ನಲ್ಲಿ 72 ಸೀಟುಗಳು ಮತ್ತು ಪ್ರೀಮಿಯಂ ಕೋಚ್ನಲ್ಲಿ 62 ಸೀಟುಗಳಿವೆ. ಸ್ಟಾಂಡರ್ಡ್ ಕೋಚ್ಗಳಿಗೆ ಕನಿಷ್ಠ ದರ 20 ರೂ. ಮತ್ತು ಗರಿಷ್ಠ ದರ 50 ರೂ. ಇದ್ದು, ಪ್ರೀಮಿಯಂ ಕೋಚ್ಗಳಿಗೆ ಕನಿಷ್ಠ ದರ 40 ರೂ. ಮತ್ತು ಗರಿಷ್ಠ 100 ರೂ. ಇದೆ.
ಅಕ್ಟೋಬರ್ 21 ರಿಂದ ಸಾರ್ವಜನಿಕರು ರ್ಯಾಪಿಡ್ಎಕ್ಸ್ನಲ್ಲಿ ಪ್ರಯಾಣ ಮಾಡಬಹುದು. ಈ ಯೋಜನೆಯನ್ನು ಅಭಿವೃದ್ಧಿಪಡಿಸಲು 30,000 ಕೋಟಿ ರೂ. ವೆಚ್ಚವಾಗಿದೆ. ಇದರ ಸಂಪೂರ್ಣ 82 ಕಿ.ಮೀ ನ ಕಾರಿಡಾರ್ 2025 ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ.