ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಮೊಟ್ಟೆಯ ಗುಣಮಟ್ಟದ ಕುರಿತಾದ ಸಂಶಯಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೆರೆ ಎಳೆದಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸಂಗ್ರಹಿಸಲಾಗಿದ್ದ ಮೊಟ್ಟೆಗಳ ಪರೀಕ್ಷಾ ವರದಿ ಬಂದಿದ್ದು, ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ ಎಂದು ದೃಢಪಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊಟ್ಟೆಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, “ಎಫ್‌ಎಸ್‌ಎಸ್‌ಎಐ ನೀಡಿರುವ ವರದಿಯಂತೆ ಮೊಟ್ಟೆಗಳು ಸೇವನೆಗೆ ಯೋಗ್ಯವಾಗಿವೆ. ಯಾವುದೇ ಕ್ಯಾನ್ಸರ್‌ಕಾರಕ ಅಥವಾ ಹಾನಿಕಾರಕ ಅಂಶಗಳು ಕಂಡುಬಂದಿಲ್ಲ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮೊಟ್ಟೆ ಸೇವಿಸಬಹುದು,” ಎಂದು ತಿಳಿಸಿದರು.
ಇದೇ ವೇಳೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಂಖ್ಯೆ ಕಡಿತವಾಗುತ್ತಿದೆ ಎಂಬ ಆತಂಕಕ್ಕೂ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ರೋಗಿಗಳ ಸಂಖ್ಯೆ ಕಡಿಮೆ ಇರುವ ಕೇಂದ್ರಗಳಿಂದ ತಜ್ಞ ವೈದ್ಯರನ್ನು ಹೆಚ್ಚಿನ ಅಗತ್ಯವಿರುವ ಕಡೆಗೆ ಶಿಫ್ಟ್ ಮಾಡಲಾಗುತ್ತಿದೆ. ತಜ್ಞ ವೈದ್ಯರ ಬದಲಿಗೆ ಇಬ್ಬರು ಎಂಬಿಬಿಎಸ್ ವೈದ್ಯರನ್ನು ಆ ಕೇಂದ್ರಗಳಿಗೆ ನೇಮಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮುಚ್ಚುವುದಿಲ್ಲ. ಈ ಕೇಂದ್ರಗಳು ಎಂದಿನಂತೆ 24 ಗಂಟೆಯೂ ಸಾರ್ವಜನಿಕರಿಗೆ ಸೇವೆ ನೀಡಲಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

