ಹೊಸದಿಗಂತ ವರದಿ ಬೆಳಗಾವಿ:
ಇಲ್ಲಿನ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಾರದೇಕೆಂಬ ಸರ್ಕಾರದ ನೋಟೀಸ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ಶುರುವಾಗಿರುವ ಮಧ್ಯೆಯೇ, ಅಧಿಕಾರಿಗಳು ದಾಖಲೆಗಳನ್ನು ತಿದ್ದಿದ್ದಾರೆಂದು ಆರೋಪಿಸಿ ಮಹಾಪೌರರಾದ ಶೋಭಾ ಸೋಮನಾಚೆ ದೂರು ಸಲ್ಲಿಸಿದ್ದಾರೆ.
ಪಾಲಿಕೆಯಲ್ಲಿ ದಾಖಲೆಗಳನ್ನು ತಿದ್ದಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕಂದಾಯ ಶಾಖೆಯ ಉಪಆಯುಕ್ತರು ಹಾಗೂ ಪರಿಷತ್ ಕಾರ್ಯದರ್ಶಿ ವಿರುದ್ಧ ಮಹಾಪೌರರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿರುವುದು ಸಂಚಲನ ಮೂಡಿಸಿದೆ.
ನಿಯಾಮವಳಿಯಂತೆ ಕಂದಾಯ ತೆರಿಗೆ ಸಂಗ್ರಹ ಮಾಡಿಲ್ಲ ಎಂದು ಇತ್ತೀಚೆಗೆ ಸರ್ಕಾರ ಇತ್ತೀಚೆಗೆ ಮಹಾಪೌರರಿಗೆ ಶೋಕಾಸ್ ನೋಟೀಸ್ ನೀಡಿ, ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಾರದೇಕೆ ಎಂದು ಪ್ರಶ್ನೆ ಹಾಕಿತ್ತು. ಇದರಿಂದ ಸಹಜವಾಗಿಯೇ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಟಪಾಟಿ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಪಾಲಿಕೆಯ ಠರಾವು ತಿದ್ದಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ದೂರಲಾಗಿದೆ ಅಲ್ಲದೇ, ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರವೂ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ, ನಾಳೆ ಶನಿವಾರ ನಡೆಯಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಟಾಪಟಿಗೆ ವೇದಿಕೆ ಸಿದ್ಧವಾಗಿದ್ದು, ತೀವ್ರ ಕೆರಳುವಂತೆ ಮಾಡಿದೆ.