ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ಬಾಂಗ್ಲಾದೇಶದಲ್ಲಿ ಹಿಂದು ಯುವಕ ದೀಪು ದಾಸ್ ಹತ್ಯೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಚಿತ್ರರಂಗದಲ್ಲೂ ಈ ಕುರಿತು ಚರ್ಚೆ ಜೋರಾಗಿದೆ.
ಬಾಲಿವುಡ್ ನಟಿಯರಾದ ಜಾನ್ಹವಿ ಕಪೂರ್ ಮತ್ತು ಕಾಜಲ್ ಅಗರ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ಅವರ ಪೋಸ್ಟ್‌ಗಳು ಗಮನ ಸೆಳೆದಿವೆ.
ಇನ್‌ಸ್ಟಾಗ್ರಾಂನಲ್ಲಿ ಜಾನ್ಹವಿ ಕಪೂರ್, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಅಮಾನವೀಯ ಹಾಗೂ ನರಮೇಧವೆಂದು ಕರೆದಿದ್ದಾರೆ. ಇದು ಸಾಮಾನ್ಯ ಹಿಂಸಾಚಾರವಲ್ಲ, ಸಾರ್ವಜನಿಕ ಗುಂಪು ಹತ್ಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಘಟನೆಗಳ ಬಗ್ಗೆ ತಿಳಿದುಕೊಳ್ಳದೆ ಅಥವಾ ಮೌನವಾಗಿರುವುದು ಅಪಾಯಕಾರಿಯೆಂದು ಎಚ್ಚರಿಸಿದ್ದು, ಕೋಮು ಹಿಂಸಾಚಾರವನ್ನು ಯಾವುದೇ ಸಂದರ್ಭದಲ್ಲೂ ಖಂಡಿಸಲೇಬೇಕು ಎಂದು ಹೇಳಿದ್ದಾರೆ. ನಮ್ಮದೇ ಜನರು ಹಿಂಸೆಗೆ ಒಳಗಾಗುತ್ತಿರುವಾಗ ಬೇರೆ ವಿಷಯಗಳ ಬಗ್ಗೆ ಮಾತ್ರ ಮಾತಾಡುವುದು ಬೂಟಾಟಿಕೆ ಎಂದು ಜಾನ್ಹವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಬೆನ್ನಟ್ಟಿಯಾಗಿ ನಟಿ ಕಾಜಲ್ ಅಗರ್ವಾಲ್ ಕೂಡ ಪೋಸ್ಟ್ ಹಂಚಿಕೊಂಡು, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದತ್ತ ಗಮನ ಹರಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ‘ದಯವಿಟ್ಟು ಎದ್ದೇಳಿ ಹಿಂದೂಗಳೆ, ಮೌನ ನಿಮ್ಮನ್ನು ಕಾಪಾಡಲಾರದು’ ಎಂದು ಬರೆದುಕೊಂಡಿದ್ದಾರೆ. ಈ ಇಬ್ಬರು ನಟಿಯರ ನಿಲುವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಅದೇ ವೇಳೆ, ಇತರ ಸೆಲೆಬ್ರಿಟಿಗಳ ಮೌನದ ಬಗ್ಗೆ ಪ್ರಶ್ನೆಗಳೂ ಕೇಳಿಬರುತ್ತಿವೆ.

