ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕುಂದಾಪುರದ ಚಪ್ಪಲಿ ಹೊಲಿಯುವ ಕಾರ್ಮಿಕನಿಗೆ ಪ್ರಧಾನಿ ಮೋದಿಯವರಿಂದ ಆಹ್ವಾನ ಬಂದಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಚಮ್ಮಾರ ಮಣಿಕಂಠ ಎಂಬುವವರಿಗೆ ಆಮಂತ್ರಣ ಬಂದಿದ್ದು, ಅವರ ಸಂತಸ ಹೇಳತೀರದಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಕುಂದಾಪುರದಲ್ಲಿ ಮಣಿಕಂಠ ಇದೀಗ ದೊಡ್ಡ ಸೆಲೆಬ್ರೆಟಿಯಾಗಿದ್ದಾರೆ.
ಇಪ್ಪತ್ತೈದು ವರ್ಷಗಳಿಂದ ಚಪ್ಪಲಿ, ಛತ್ರಿ, ಸ್ಕೂಲ್ ಬ್ಯಾಗ್, ಚರ್ಮದ ಬಳೆ ರಿಪೇರಿ ಮಾಡಿಕೊಂಡೇ ಜೀವನ ನಡೆಸುತ್ತಿರುವ ಮಣಿಕಂಠ, ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಫಲಾನುಭವಿಯೂ ಆಗಿದ್ದಾರೆ. ಹೀಗಾಗಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಆಮಂತ್ರಣ ದೊರಕಿದ್ದು, ಜನಸಾಮಾನ್ಯನಿಗೂ ಇಂತಹ ಅವಕಾಶ ಕೊಟ್ಟಿದ್ದಕ್ಕೆ ಮಣಿಕಂಠ ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಮನದಾಳದ ಮಾತುಗಳನ್ನಾಡಿರುವ ಮಣಿಕಂಠ, ʻಸಾಮಾನ್ಯನಿಗೆ ಇಂತಹ ದೊಡ್ಡ ಅವಕಾಶ ಸಿಕ್ಕಿರುವುದು ನಂಬಲಸಾಧ್ಯವಾದರೂ ಇದು ಸತ್ಯ. ಅದೂ ಪ್ರಧಾನಿಯವರಿಂದಲೇ ಆಹ್ವಾನ ಸಿಕ್ಕಿರುವುದು ನಿಜಕ್ಕೂ ಸಂತಸ ತಂದಿದೆ. ಮೊದಲ ಬಾರಿಗೆ ವಿಮಾನದಲ್ಲಿ ದೆಹಲಿಗೆ ಹಾರುತ್ತಿದ್ದೇನೆ. ಇಲ್ಲಿವರೆಗೂ ಟಿವಿಯಲ್ಲಿ ಮಾತ್ರ ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಇದೀಗ ನೇರವಾಗಿ ಆ ಶುಭಗಳಿಗೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿರುವ ನಾನೇ ಧನ್ಯʼ ಎಂದರು.