ಹೊಸದಿಗಂತ ವರದಿ,ಕುಮಟಾ :
ದಿನ ಕಳೆದಂತೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು, ರೈತಾಪಿ ವರ್ಗದವರಿಗೆ ಸಮಸ್ಯೆಯನ್ನೂ ತಂದೊಡ್ಡುತ್ತಿದೆ. ಕೇವಲ ತೋಟದ ಬೆಳೆಗಳನ್ನಷ್ಟೇ ಹಾಳುಮಾಡುತ್ತಿದ್ದ ಕಾಡು ಪ್ರಾಣಿಗಳು ಇದೀಗ ಕೆಲಸಗಾರರ ಮೇಲೂ ದಾಳಿಗೆ ಮುಂದಾಗಿರುವುದು ಭಯದ ವಾತಾವರಣ ಸೃಷ್ಟಿಸಿದೆ.
ತಾಲೂಕಿನ ಮೂರೂರು ಪಂಚಾಯಿತಿ ವ್ಯಾಪ್ತಿಯ ಕರ್ಕಿಮಕ್ಕಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕಾರ್ಮಿಕನ ಮೇಲೆ ಕಾಡುಹಂದಿಯೊಂದು ದಾಳಿ ಮಾಡಿದ ಪರಿಣಾಮವಾಗಿ, ವ್ಯಕ್ತಿ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕರ್ಕಿಮಕ್ಕಿಯ ಮಾರು ಬೊಮ್ಮ ಗೌಡ ಹಂದಿದಾಳಿಯಿಂದ ಗಾಯಗೊಂಡ ವ್ಯಕ್ತಿ. ಮಾರು ಬೊಮ್ಮ ಗೌಡ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅದೆಲ್ಲಿಂದಲೋ ಏಕಾಏಕಿ ದಾಳಿ ಮಾಡಿದ ಕಾಡುಹಂದಿಯು ತನ್ನ ಕೋರೆಹಲ್ಲುಗಳಿಂದ ಮಾರು ಗೌಡರ ಬಲಗಾಲಿನ ತೊಡೆಯನ್ನೇ ಸೀಳಿ ಹಾಕಿದೆ.
ಈ ಸಂದರ್ಭದಲ್ಲಿ ಹಂದಿಯಿಂದ ತಪ್ಪಿಸುಕೊಳ್ಳಲು ಅವರು ಯತ್ನಿಸಿದ ಸಂದರ್ಭದಲ್ಲಿ, ಇತರ ಕಡೆಗಳಲ್ಲೂ ಗಾಯಗಳಾಗಿವೆ. ಇವರ ಬೊಬ್ಬಾಟ ಕೇಳಿ ತಕ್ಷಣ ಆಸುಪಾಸಿನ ಜನ ಬಂದು ರಕ್ಷಿಸಿದ್ದು ಕುಮಟಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿ, ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದ್ದು ಬೆಳೆ ಹಾನಿಯ ಜತೆಗೆ ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ. ಇದನ್ನು ನಿಯಂತ್ರಿಸಬೇಕು ಹಾಗೂ ಮಾರು ಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಎಂ.ಎಸ್.ಹೆಗಡೆ ಹಾಗೂ ಇತರರು ವಿನಂತಿಸಿದ್ದಾರೆ.