ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಿರುವನಂತಪುರಂ ಮಹಾನಗರ ಪಾಲಿಕೆಗೆ ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆಯಾಗಿದ್ದಾರೆ. ದಶಕಗಳ ಕಾಲ ಎಡಪಕ್ಷಗಳ ಪ್ರಾಬಲ್ಯವಿದ್ದ ನಗರದಲ್ಲಿ ಬಿಜೆಪಿ ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.
ಮೇಯರ್ ಸ್ಥಾನಕ್ಕೆ ನಡೆದ ಮತದಾನದಲ್ಲಿ 45 ವರ್ಷದ ವಿ.ವಿ. ರಾಜೇಶ್ ಅವರಿಗೆ 51 ಮತಗಳು ಲಭಿಸಿವೆ. ಸಿಪಿಐಎಂ ಅಭ್ಯರ್ಥಿ ಆರ್.ಪಿ. ಶಿವಾಜಿ 29 ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ ಅವರಿಗೆ 19 ಮತಗಳು ಸಿಕ್ಕಿವೆ. ಒಬ್ಬ ಸ್ವತಂತ್ರ ಕೌನ್ಸಿಲರ್ ಗೈರುಹಾಜರಾಗಿದ್ದರೆ, ಮತ್ತೊಬ್ಬ ಸ್ವತಂತ್ರ ಸದಸ್ಯ ಪಿ. ರಾಧಾಕೃಷ್ಣನ್ ನೀಡಿದ ಬೆಂಬಲ ಬಿಜೆಪಿ ಗೆಲುವಿಗೆ ನಿರ್ಣಾಯಕವಾಯಿತು.
ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ರಾಜೇಶ್, ಎಲ್ಲಾ ವಾರ್ಡ್‌ಗಳ ಸಮಾನ ಅಭಿವೃದ್ಧಿ ತಮ್ಮ ಆದ್ಯತೆಯಾಗಿದ್ದು, ತಿರುವನಂತಪುರಂ ಅನ್ನು ಅಭಿವೃದ್ಧಿಶೀಲ ನಗರವಾಗಿ ರೂಪಿಸುವ ಸಂಕಲ್ಪ ವ್ಯಕ್ತಪಡಿಸಿದರು. ಡಿಸೆಂಬರ್ 9ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆದ್ದು ದಾಖಲೆಯ ಸಾಧನೆ ಮಾಡಿತ್ತು.
ವೃತ್ತಿಯಲ್ಲಿ ವಕೀಲರಾಗಿರುವ ರಾಜೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಈ ಬೆಳವಣಿಗೆ ಕೇರಳ ರಾಜಕೀಯದಲ್ಲಿ ಬಿಜೆಪಿಗೆ ಹೊಸ ಅಧ್ಯಾಯ ಆರಂಭಿಸಿದಂತೆ ಕಾಣುತ್ತಿದೆ.

