ಹೊಸದಿಗಂತ ಡಿಜಿಟಲ್ ಡೆಸ್ಕ್:
ತಲೆಗೆ ಗುಂಡು ಹಾರಿಸಿಕೊಂಡು ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ನವಮಂಗಳೂರು ಬಂದರು ಮುಖ್ಯದ್ವಾರದ ಬಳಿ ನಡೆದಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಪಿಎಸ್ಐ ಝಾಕಿರ್ ಹುಸೇನ್(58) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ರಾಯಚೂರು ಮೂಲದ ಹುಸೇನ್ ಎನ್ಎಂಪಿಟಿ ಮುಖ್ಯದ್ವಾರದಲ್ಲಿ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಭಾನುವಾರ ಬೆಳಿಗ್ಗೆ 6:30ಕ್ಕೆ ಶೌಚಾಲಯಕ್ಕೆ ಹೋದವರು ತಮ್ಮ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಗುಂಡಿನ ಸದ್ದು ಕೇಳಿ ಶೌಚಾಲಯದತ್ತ ಸ್ಥಳೀಯರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.