ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಹಜಾರೆ ಟ್ರೋಫಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ನಿರಾಸೆಯನ್ನು ಮರೆಸುವಂತೆ ಕರ್ನಾಟಕ ತಂಡ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಜಾರ್ಖಂಡ್ ನೀಡಿದ್ದ 412 ರನ್‌ಗಳ ಸವಾಲಿನ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿದ್ದ ಕರ್ನಾಟಕ, ಇದೀಗ ಕೇರಳ ವಿರುದ್ಧವೂ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಶತಕದೊಂದಿಗೆ ತಂಡದ ಗೆಲುವಿನ ರೂವಾರಿಗಳಾದರು.
ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ 50 ಓವರ್‌ಗಳಲ್ಲಿ 284 ರನ್‌ಗಳಿಗೆ ಸೀಮಿತವಾಯಿತು. ಬಾಬಾ ಅಪರಾಜಿತ್ 71 ರನ್ ಹಾಗೂ ವಿಕೆಟ್ ಕೀಪರ್ ಅಜರುದ್ಧೀನ್ 84 ರನ್‌ಗಳೊಂದಿಗೆ ತಂಡವನ್ನು ಮುನ್ನಡೆಸಿದರು. ಕರ್ನಾಟಕ ಪರ ಅಭಿಲಾಶ್ ಶೆಟ್ಟಿ ಮೂರು ವಿಕೆಟ್ ಪಡೆದು ಮಿಂಚಿದರೆ, ಶ್ರೇಯಸ್ ಗೋಪಾಲ್ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:
285 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ ಆರಂಭದಲ್ಲೇ ನಾಯಕ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡರೂ, ನಂತರ ಪಡಿಕ್ಕಲ್ ಹಾಗೂ ಕರುಣ್ ನಾಯರ್ ದಾಖಲೆಯ ಜೊತೆಯಾಟ ಕಟ್ಟಿದರು. ಎರಡನೇ ವಿಕೆಟ್‌ಗೆ 223 ರನ್‌ಗಳ ಜತೆಯಾಟ ನಡೆಸಿದ ಈ ಜೋಡಿ ಶತಕ ಸಿಡಿಸಿ ಕೇರಳ ಬೌಲರ್‌ಗಳನ್ನು ಅಸಹಾಯಕಗೊಳಿಸಿತು. ಪಡಿಕ್ಕಲ್ 124 ರನ್ ಬಾರಿಸಿದರೆ, ಕರುಣ್ ನಾಯರ್ ಅಜೇಯ 130 ರನ್ ಗಳಿಸಿದರು. ಅಂತಿಮವಾಗಿ ಕರ್ನಾಟಕ ತಂಡ 10 ಎಸೆತಗಳು ಬಾಕಿ ಇರುವಂತೆಯೇ ಸುಲಭ ಜಯ ಸಾಧಿಸಿತು.

