ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಮೈಸೂರು ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಅರಮನೆಯಲ್ಲಿ ಚಿನ್ನದ ಅಂಬಾರಿ ಅಲಂಕಾರ ಪೂರ್ಣಗೊಂಡಿದ್ದು, ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊತ್ತು ಸಾಗಲು ಸಿದ್ಧವಾಗಿದೆ. ಜಂಬೂಸವಾರಿ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ಶ್ರೀಮಂತ ಪರಂಪರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಬಂದಿದ್ದಾರೆ. ಜಂಬೂಸವಾರಿ ಮಾತ್ರವಲ್ಲದೆ ಮೆರವಣಿಗೆಯಲ್ಲಿ ಗಜಪಡೆ, ಟ್ಯಾಬ್ಲೋ, ಸಾಂಸ್ಕೃತಿಕ ಕಲಾ ತಂಡಗಳು ಗಮನ ಸೆಳೆಯಲಿವೆ.
ಗಜಪಡೆಯ ಗಾಂಭೀರ್ಯ ನಡಿಗೆ
ಪ್ರತಿ ವರ್ಷದಂತೆ ಈ ವರ್ಷವೂ ಜಂಬೂಸವಾರಿ ಮೆರವಣಿಗೆಯಲ್ಲಿ ಹದಿನಾಲ್ಕು ಆನೆಗಳು ಹೆಜ್ಜೆ ಹಾಕಲಿವೆ. ಅಭಿಮನ್ಯು, ವಿಜಯ, ವರಲಕ್ಷ್ಮೀ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮೀ, ಹಿರಣ್ಯ ಆನೆಗಳ ಗಾಂಭೀರ್ಯ ನಡಿಗೆ ಜಂಬೂಸವಾರಿಯ ಹಿರಿಮೆಯನ್ನು ಹೆಚ್ಚಿಸಲಿವೆ.
ಸಂಸ್ಕೃತಿಯ ಪ್ರತೀಕವಾದ ಸ್ತಬ್ಧಚಿತ್ರಗಳು
ಮೈಸೂರಿನ ಜಂಬೂಸವಾರಿಯಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ಸಾಗಲಿದೆ. ಒಟ್ಟು 49ಸ್ತಬ್ಧಚಿತ್ರಗಳು ಜಂಬೂಸವಾರಿಯ ಮೆರವಣಿಗೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಲಿವೆ.
ಮೆರವಣಿಗೆಯ ಮೆರುಗು ಹೆಚ್ಚಿಸುವ ಕಲಾ ತಂಡಗಳು
ಜಂಬೂಸವಾರಿಯೇ ಕೇಂದ್ರಬಿಂದು ಇದರ ಜೊತೆ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಪ್ರದರ್ಶನ ನೀಡಲು ಸಜ್ಜಾಗಿವೆ. ಒಟ್ಟು 95 ಕಲಾತಂಡಗಳು ಪ್ರದರ್ಶನ ನೀಡುತ್ತಾ ಮೆರವಣಿಗೆಗೆ ಮೆರುಗು ತುಂಬಲಿವೆ.