ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲು ಕಸರತ್ತು ನಡೆಸುತ್ತಿದ್ದು, ಹೀಗಾಗಿ ಬುಧವಾರ ಎರಡು ಮಹತ್ವದ ‘ಗ್ಯಾರಂಟಿ’ ಯೋಜನೆಗಳನ್ನು ಪ್ರಕಟಿಸಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 1.05 ಕೋಟಿ ಕುಟುಂಬಗಳಿಗೆ 500 ರೂ. ಬೆಲೆಗೆ ಅಡುಗೆ ಅನಿಲ ಸಿಲಿಂಡರ್ ಹಾಗೂ ಕುಟುಂಬದ ಯಜಮಾನಿಗೆ ವಾರ್ಷಿಕ 10 ಸಾವಿರ ರೂ. ಆರ್ಥಿಕ ನೆರವು ಒದಗಿಸುವುದಾಗಿ ಪಕ್ಷ ಘೋಷಿಸಿದೆ.
ಝುಂಝುನು ಜಿಲ್ಲೆಯ ಅರ್ದಾವತಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಗ್ಯಾರಂಟಿ ಯೋಜನೆಗಳು ಪ್ರಕಟಿಸಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಆದರೆ, ಅದು ಜಾರಿಗೆ ಬರಲು 10 ವರ್ಷ ಬೇಕಾಗುತ್ತದೆ. ಅದೇ ರೀತಿಯಾಗಿ ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 10 ವರ್ಷಗಳು ಕಳೆದಿವೆ. ಆದರೆ, ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕೇಂದ್ರದ ಎಲ್ಲ ಯೋಜನೆಗಳು ಪೊಳ್ಳಾಗಿವೆ. ಮತ್ತೊಂದೆಡೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ತಾನು ಪ್ರಕಟಿಸಿದ ಯೋಜನೆಗಳನ್ನು ನುಡಿದಂತೆ ಅನುಷ್ಠಾನಗೊಳಿಸುತ್ತಿದೆ ಹೇಳಿದರು.
ರಾಜ್ಯ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆ, ಹಳೆಯ ಪಿಂಚಣಿ ಯೋಜನೆ ಸೇರಿ ಮುಂತಾದ ಯೋಜನೆಗಳನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕಿ,ಮೋದಿ ತಮಗೋಸ್ಕರ ಮತ ನೀಡುವಂತೆ ಕೇಳುತ್ತಾರೆ. ಆದರೆ, ಅವರು ಇಲ್ಲಿ ಬಂದು ಮುಖ್ಯಮಂತ್ರಿ ಆಗಲ್ಲ. ರಾಜ್ಯ ಬಿಜೆಪಿ ಬಣಗಳಾಗಿ ಒಡೆದು ಹೋಗಿದೆ. ಅದು ನಿಮ್ಮ ಭವಿಷ್ಯದ ಬಗ್ಗೆ ಕಾಳಜಿ ವಹಿಸಲ್ಲ. ಆದರೆ, ಕಾಂಗ್ರೆಸ್ ಪಕ್ಷ ನಿಮಗಾಗಿ ಸಮರ್ಪಿತವಾಗಿದೆ. ಸಚಿನ್ ಪೈಲಟ್‌ನಂತಹ ಯುವ ನಾಯಕರು ಹಾಗೂ ಗೆಹ್ಲೋಟ್‌ರಂತಹ ಅನುಭವಿ ನಾಯಕರು ಕಾಂಗ್ರೆಸ್ನಲ್ಲಿದ್ದಾರೆ ಎಂದರು.