ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು, ಯುವಕರು ವಾರಕ್ಕೆ 70ಗಂಟೆ ದುಡಿಯಬೇಕು: ನಾರಾಯಣಮೂರ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವನ್ನು ಕಟ್ಟಲು ಹೆಚ್ಚಿನ ಅವಕಾಶ ಇರುವುದು ಯುವಕರಿಗೆ, ನಮ್ಮ ದೇಶದ ಕೆಲಸದ ಸಂಸ್ಕೃತಿ ಬದಲಾಗಬೇಕು. ಯುವಕರು ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.

ಸಂವಾದವೊಂದರಲ್ಲಿ ಈ ಬಗ್ಗೆ ನಾರಾಯಣಮೂರ್ತಿ ಅವರು ಮಾತನಾಡಿದ್ದು, ಪಾಶ್ಚಿಮಾತ್ಯರ ಅನಪೇಕ್ಷಿತ ಹವ್ಯಾಸಗಳನ್ನು ನಾವು ರೂಢಿ ಮಾಡಿಕೊಳ್ಳಬಾರದು, ಭಾರತ ನನ್ನ ದೇಶ, ನನ್ನ ದೇಶಕ್ಕಾಗಿ ನಾನು ದುಡಿಯುತ್ತೇನೆ. ನಾನು ಹೆಚ್ಚು ದುಡಿದರೆ ನನ್ನ ದೇಶ ಹೆಚ್ಚು ಪ್ರಗತಿ ಕಾಣುತ್ತದೆ ಎನ್ನುವ ಮನೋಭಾವ ಪ್ರತಿ ಭಾರತೀಯನಲ್ಲೂ ಬರಬೇಕು.

ನನ್ನ ದೇಶಕ್ಕಾಗಿ ನಾನು ವಾರದಲ್ಲಿ 70 ಗಂಟೆ ದುಡಿಯುತ್ತೇನೆ ಎನ್ನುವ ಮನಸ್ಥಿತಿ ರೂಢಿ ಮಾಡಿಕೊಳ್ಳಬೇಕು ಎಂದಿದ್ದಾರೆ. ಎರಡನೇ ಮಹಾಯುದ್ಧದ ನಂತರ ಜರ್ಮನಿ ಹಾಗೂ ಜಪಾನ್ ತನ್ನ ದೇಶದ ಅಭಿವೃದ್ಧಿಗಾಗಿ ಕೆಲ ವರ್ಷಗಳವರೆಗೂ ಹೆಚ್ಚುವರಿ ಅವಧಿ ಕೆಲಸ ಮಾಡಿದೆ. ನಮ್ಮ ದೇಶದಲ್ಲಿ ಕೆಲಸದ ಉತ್ಪಾದಕತೆ ಕಡಿಮೆ, ವಿಶ್ವದಲ್ಲೇ ಅತೀ ಕಡಿಮೆ ಎಂದಿದ್ದಾರೆ.

ನಮ್ಮ ಕೆಲಸದ ಉತ್ಪಾದಕತೆ ಹೆಚ್ಚು ಮಾಡಿಕೊಂಡು, ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆಯಾದಾಗ ಮಾತ್ರ ನಾವು ಇತರ ದೇಶಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯ, ಶಿಸ್ತುಬದ್ಧವಾಗಿ ಕೆಲಸ ಮಾಡದೇ ಹೋದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಯುವಕರಿಗೆ ಕರೆ ನೀಡಿದ್ದಾರೆ.

ಯುವಕರು ವಾರಕ್ಕೆ 70 ಗಂಟೆ ದುಡಿಯಬೇಕು ಎನ್ನುವ ಹೇಳಿಕೆಯಿಂದಾಗಿ ಇದೀಗ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಕೆಲವರು ನಾರಾಯಣಮೂರ್ತಿ ಅವರ ಮಾತನ್ನು ಒಪ್ಪಿಕೊಂಡಿದ್ದು, ಹೆಚ್ಚು ಕೆಲಸ ಮಾಡಬೇಕು ಎಂದರೆ ಹಲವರು ಖಾಸಗಿ ಜೀವನಕ್ಕೂ ಸಮಯ ನೀಡಬೇಕು ಎಂದು ವಾದ ಮಾಡಿದ್ದಾರೆ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾತ್ರ ಜೋರಾಗಿಯೇ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here