ಹೊಸದಿಗಂತ ವರದಿ, ಕುಮಟಾ:
ತಾಲೂಕಿನ ನುಸಿಕೋಟೆಯ ಬಳಿ ಮೀನುಗಾರರೊಬ್ಬರಿಗೆ ಕಲ್ಲಾಗಿ ರೂಪುಗೊಂಡ ಏಡಿಯೊಂದರ ಮೃತದೇಹ ಲಭ್ಯವಾಗಿದ್ದು, ಇದೀಗ ಅದು ಪ್ರಕೃತಿಪ್ರಿಯರ ಹಾಗೂ ತಜ್ಞರ ಕುತೂಹಲಕ್ಕೆ ಕಾರಣವಾಗಿದೆ. ಈ ಕಲ್ಲಾದ ಏಡಿ ನೂರಾರು ವರ್ಷಗಳ ಹಳೆಯ ಪಳೆಯುಳಿಕೆ ಇರಬಹುದೆಂದು ತಜ್ಞರು ಅಂದಾಜಿಸುತಿದ್ದಾರೆ.
ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ನಡೆಸುತಿದ್ದ ವೇಳೆ ಮೀನುಗಾರ ಈಶ್ವರ ಹರಿಕಂತ್ರ ಎಂಬುವರಿಗೆ ಏಡಿ ಕಲ್ಲು ಸಿಕ್ಕಿದ್ದು, ಅವರು ಮೊದಲು ಇದನ್ನು ಸಾಮಾನ್ಯ ಏಡಿ ಎಂದು ಕೈಯಲ್ಲಿ ಹಿಡಿದಿದ್ದಾರಂತೆ, ಆದರೆ ಅದು ಸಾಮಾನ್ಯ ಏಡಿಯಂತೆ ಇರದೇ ಕಲ್ಲಿನಂತೆ ಸ್ಪರ್ಷಾಅನುಭವ ನೀಡಿದೆ. ಹೀಗಾಗಿ ಈ ಏಡಿಯಲ್ಲಿ ವಿಶೇಷವಿದೆ ಎಂಬುದನ್ನು ಗಮನಿಸಿದ ಅವರು ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಎಂಬವರಿಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದೀಗ ಅದು ಕಾರವಾರದ ಕಡಲಜೀವಶಾಸ್ತ್ರಜ್ಞರ ಗಮನಕ್ಕೆ ಬಂದು ಅವರಿಗೆ ಹಸ್ತಾಂತರವಾಗಿದೆ. ತಜ್ಞರು ಅದನ್ನು ನದಿಯಲ್ಲಿ ನೂರಾರು ವರ್ಷಗಳನ್ನು ಸವೆಸಿ ಕಲ್ಲಿನ ರೂಪ ಪಡೆದ ಏಡಿ ಎಂದು ಅಂದಾಜಿಸಿದ್ದಾರೆ.
ಸಿಹಿನೀರಿನಲ್ಲಿ ಕಲ್ಲು ಏಡಿ ಪತ್ತೆಯೂ ಕುತೂಹಲ ಕೆರಳಿಸಿದ್ದು, ಅದರ ನಿಖರ ಆಯಸ್ಸು ಎಷ್ಟು ಎಂದು ಗುರುತಿಸುವ ಹಾಗೂ ಇತರ ವಿವರಕ್ಕಾಗಿ ಕಡಲ ಜೀವಶಾಸ್ತ್ರಜ್ಞರ ಜೊತೆ ಇದೀಗ ಪುರಾತತ್ವ ಸಂಶೋಧಕರು ಸಂಶೋಧನೆಗಿಳಿದಿದ್ದಾರೆ.