ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸ್ವಾಗತಕ್ಕೆ ರಾಜಧಾನಿ ಸಜ್ಜಾಗುತ್ತಿರುವ ಬೆನ್ನಲ್ಲೇ, ಸಂಚಾರ ಪೊಲೀಸರು ಪಾನಮತ್ತ ಚಾಲಕರಿಗೆ ಸಿಂಹಸ್ವಪ್ನವಾಗಿದ್ದಾರೆ. ನಗರದಾದ್ಯಂತ ರಸ್ತೆ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ‘ಡ್ರಂಕ್ ಅಂಡ್ ಡ್ರೈವ್’ ತಪಾಸಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಜೆಸ್ಟಿಕ್ ಸಂಪರ್ಕಿಸುವ ಪ್ರಮುಖ ಜಂಕ್ಷನ್‌ಗಳಲ್ಲಿ ಹಗಲು-ರಾತ್ರಿ ಎನ್ನದೆ ತಪಾಸಣೆ ನಡೆಸಲಾಗುತ್ತಿದೆ.
ಕಳೆದ ಒಂದು ವಾರದಿಂದ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ ಪ್ರತಿದಿನ ಸರಾಸರಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ದೃಢಪಟ್ಟರೆ ತಕ್ಷಣವೇ ವಾಹನವನ್ನು ಜಪ್ತಿ ಮಾಡಲಾಗುತ್ತಿದೆ. ಇದರೊಂದಿಗೆ ಚಾಲಕರಿಗೆ 10,000 ರೂಪಾಯಿ ಭಾರಿ ದಂಡವನ್ನೂ ವಿಧಿಸಲಾಗುತ್ತಿದೆ.
“ನಾಗರಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹೊಸ ವರ್ಷದ ಸಂಭ್ರಮಾಚರಣೆ ಮುಗಿಯುವವರೆಗೂ ಈ ವಿಶೇಷ ತಪಾಸಣೆಗಳು ನಿರಂತರವಾಗಿ ನಡೆಯಲಿವೆ” ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಪಾರ್ಟಿ ಮೂಡ್‌ನಲ್ಲಿರುವವರು ವಾಹನ ಚಲಾಯಿಸುವ ಬದಲು ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್‌ಗಳನ್ನು ಅವಲಂಬಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

