ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಸಂಭವಿಸಿದ ಸ್ಫೋಟಕಕ್ಕೆ ‘ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಲಾಗಿದೆ ಎಂದು ಡಿಜಿಪಿ ಡಾ.ಶೇಖ್ ದರ್ವೇಶ್ ಸಾಹೇಬ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಸ್ಫೋಟಕ್ಕೆ ಐಇಡಿ ಬಳಸಿರುವುದಾಗಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.
‘ಇಂದು ಬೆಳಗ್ಗೆ 9.40ರ ಸುಮಾರಿಗೆ ಕಲಮಸ್ಸೆರಿಯ ಝಮ್ರಾ ಇಂಟರ್ನ್ಯಾಷನಲ್ ಕನ್ವೆನ್ಸನ್ ಸೆಂಟರ್ನಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಕನ್ವೆನ್ಸನ್ ಸೆಂಟರ್ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ಕೃತ್ಯ ನಡೆಸಿರುವುದು ತಿಳಿದುಬಂದಿದೆ. ಕೆಲವೊಂದು ಅವಶೇಷಗಳು ದೊರಕಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ. ಇದರ ಹಿಂದಿರುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೀಗಾಗಲೇ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಹೆಚ್ಚುವರಿ ಡಿಜಿಪಿ ಸ್ಥಳಕ್ಕೆ ಭೇಟಿ ನೀಡಿದ್ದು, ನಾನು ಕೂಡ ಸ್ಥಳಕ್ಕೆ ಇಂದು ಭೇಟಿ ನೀಡಲಿದ್ದೇನೆ’ ಎಂದು ತಿಳಿಸಿದ್ದಾರೆ.
ಘಟನೆ ಗಂಭೀರವಾದುದು.ಎಲ್ಲ ಆಯಮಾಗಳಲ್ಲೂ ತನಿಖೆ ನಡೆಸಲಿದ್ದೇವೆ. ತನಿಖೆಗೆ ಹೊಸ ತಂಡವೊಂದನ್ನು ರಚಿಸಲಾಗಿದೆ. ಇದೇ ವೇಳೆ, ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ, ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡಿದ್ದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. .
ಯಾರು ಕೂಡ ಯಾವುದೇ ವದಂತಿಗಳನ್ನು ನಂಬಬೇಡಿ. ಜನರು ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.