ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕದ ಕೋಗಿಲು ಬಂಡೆ ಬಳಿಯ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ನಡೆದ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆಯು ಅಂತರರಾಜ್ಯ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಉತ್ತರ ಪ್ರದೇಶದ ಮಾದರಿಯ ‘ಬುಲ್ಡೋಜರ್ ನೀತಿ’ಯನ್ನು ಅನುಸರಿಸುತ್ತಿದೆ. ವರ್ಷಗಳಿಂದ ವಾಸವಿದ್ದ ಮುಸ್ಲಿಂ ಕುಟುಂಬಗಳನ್ನು ಈ ಕೊರೆಯುವ ಚಳಿಯಲ್ಲಿ ಬೀದಿಗೆ ಹಾಕಿರುವುದು ಮಾನವೀಯತೆಯ ವಿರೋಧಿ ಕ್ರಮ. ಕಾಂಗ್ರೆಸ್ ಈಗ ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನೇ ಮಾಡುತ್ತಿದೆ,” ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಇಂತಹ ಪ್ರವೃತ್ತಿಯನ್ನು ವಿರೋಧಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕೋಗಿಲು ಬಳಿ ಇರುವ ಸುಮಾರು 14.36 ಎಕರೆ ಜಮೀನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಸೇರಿದ್ದಾಗಿದೆ. ಇಲ್ಲಿ ಬಯೋ ಮೆಥನೈಸೇಶನ್ ಪ್ಲಾಂಟ್ ಮತ್ತು ಪ್ರಾಣಿಗಳ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಈ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಸುಮಾರು 150ಕ್ಕೂ ಹೆಚ್ಚು ಶೆಡ್‌ಗಳನ್ನು 9 ಜೆಸಿಬಿ ಮತ್ತು 9 ಟ್ರ್ಯಾಕ್ಟರ್‌ಗಳ ಮೂಲಕ ನೆಲಸಮಗೊಳಿಸಲಾಗಿದೆ.
“ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಂದು ಮನೆಗಳನ್ನು ಕೆಡವಲಾಗಿದೆ. ಮಕ್ಕಳನ್ನು ಕರೆದುಕೊಂಡು ನಾವು ಎಲ್ಲಿಗೆ ಹೋಗಬೇಕು?” ಎಂದು ವಸತಿ ಕಳೆದುಕೊಂಡ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

