ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಸ್ಟಾರ್ ನಟರು ಇಂದು ಗಡಿ ಮೀರಿ ಬೆಳೆಯುತ್ತಿದ್ದಾರೆ. ಶಿವರಾಜ್‌ಕುಮಾರ್ ‘ಜೈಲರ್’ ಮೂಲಕ ತಮಿಳಿನಲ್ಲಿ ಮಿಂಚಿದರೆ, ಉಪೇಂದ್ರ ಅವರು ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಪ್ರತಿಭೆಗಳಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯವೇ ಆದರೂ, ಇದರ ಹಿಂದಿರುವ ಒಂದು ಕಹಿ ಸತ್ಯವನ್ನು ನಟ ಸುದೀಪ್ ಬಿಚ್ಚಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ್, “ನಾವು ಕನ್ನಡ ಕಲಾವಿದರು ಬೇರೆ ಭಾಷೆಯ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಲು ಸದಾ ಸಿದ್ಧರಿರುತ್ತೇವೆ. ಆದರೆ, ಅದೇ ಪ್ರೀತಿ ಅಥವಾ ಸಹಕಾರ ಬೇರೆ ಭಾಷೆಯ ಸ್ಟಾರ್ ನಟರಿಂದ ನಮಗೆ ಸಿಗುತ್ತಿಲ್ಲ” ಎಂದು ನೇರವಾಗಿಯೇ ನುಡಿದಿದ್ದಾರೆ.
“ನಾನು ವೈಯಕ್ತಿಕವಾಗಿ ಕೆಲವು ಪರಭಾಷಾ ನಟರನ್ನು ನಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿದ್ದೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗದ ಈ ಬಾಂಧವ್ಯ ಎರಡು ಕಡೆಗಳಿಂದಲೂ ಸಮಾನವಾಗಿರಬೇಕು. ನಾವು ಅಲ್ಲಿಗೆ ಹೋಗುವಂತೆ, ಅವರು ಕೂಡ ಇಲ್ಲಿಗೆ ಬರಬೇಕು. ಆದರೆ ಸದ್ಯಕ್ಕೆ ಇದು ಕೇವಲ ಒಂದು ಕಡೆಯಿಂದ ಮಾತ್ರ ನಡೆಯುತ್ತಿದೆ ಎಂಬುದು ಸುದೀಪ್ ಅವರ ವಾದ.
ಸಂಜಯ್ ದತ್ ಅವರಂತಹ ನಟರು ಕನ್ನಡದ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಕೇವಲ ಅತಿಥಿ ಪಾತ್ರ ಅಥವಾ ಸ್ನೇಹಕ್ಕಾಗಿ ಮಾಡುವ ಪಾತ್ರಗಳಲ್ಲಿ ಪರಭಾಷಾ ಸ್ಟಾರ್‌ಗಳು ಕನ್ನಡದತ್ತ ಮುಖ ಮಾಡುತ್ತಿಲ್ಲ. ಈ ಹಿಂದೆ ಸುದೀಪ್ ಅವರೇ ‘ಬಾಹುಬಲಿ’ಯಂತಹ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುದೀಪ್ ಅವರ ಈ ನೇರ ನುಡಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

