ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶದ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಿಲ್ಲ ಎಂದು ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ತಪ್ಪು ಮಾಹಿತಿ ನೀಡೋದು ಕಾಂಗ್ರೆಸ್ ಅಂಟಿದ ಚಟ ಅನ್ನೋದು ಗೊತ್ತಿರುವ ವಿಷಯ, ಆದರೆ ಮುಖ್ಯಮಂತ್ರಿಗಳೇ ಖುದ್ದಾಗಿ ತಪ್ಪು ಮಾಹಿತಿ ಹಂಚಿ ಜನರ ಮನಸ್ಥಿತಿಯನ್ನು ಹಾಳು ಮಾಡುತ್ತಿರುವುದು ಊಹೆಗೂ ಮೀರಿದ್ದು. ಮೇಕೆದಾಟು ಯೋಜನೆಯ ವಾಸ್ತವ ನಿಮಗೆ ಚೆನ್ನಾಗಿ ತಿಳಿದಿದೆ, ಆದರೂ ತಪ್ಪು ಮಾಹಿತಿ ಹಂಚಿದ್ದೀರಿ ಎಂದಿದ್ದಾರೆ.
ನಿಮ್ಮ ಬ್ರೀಫಿಂಗ್ ತಂಡ ನೀಡಿರುವ ಅರ್ಧಂಬರ್ಧ ಮಾಹಿತಿ ಆಧರಿಸಿ ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಿದ್ದೀರಿ, ಜನರಲ್ಲಿ ಮತ್ತೆ ನೆಮ್ಮದಿ ವಾಪಾಸ್ ಮಾಡಲು ವಾಸ್ತವಾಂಶ ಬಯಲಿಗೆಳೆಯಬೇಕಿದೆ ಎಂದಿದ್ದಾರೆ.
ಯಾವ್ಯಾವ ಅಂಶಗಳಿವೆ?
- ಸಿಡಬ್ಲೂಎಮ್ಎಯ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು, ಆದರೆ ಈ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇದ್ದ ಕಾರಣ ಚರ್ಚೆ ಮಾಡಲು ಆಗಿಲ್ಲ. ಆದರೆ ಇದು ಕೇಂದ್ರದ ತಪ್ಪಲ್ಲ.
- ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ?
- 2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)- ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ.ಗಳ ಪೈಕಿ 1190.05 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಾರದಿರುವುದು ಚೋದ್ಯವಲ್ಲವೇ ?
- ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ, ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ 28.10.2023ರ ವರೆಗೆ ಕೇವಲ 274.05 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಂಡಿದ್ದೀರಿ ಎಂದಿದ್ದಾರೆ.
ಸತ್ಯದ ಗೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡುವಾಗ ನಿಮ್ಮ ಆತ್ಮಸಾಕ್ಷಿ ಬೇಡ ಎನ್ನಲಿಲ್ಲವೇ? ಇಲ್ಲ ಎನ್ನುವುದಾದರೆ, ಸುಳ್ಳೇ ನಿಮ್ಮ ನಿತ್ಯಕರ್ಮವಾದರೆ ರಾಜ್ಯದ ಜನತೆ ನಿಮ್ಮ ಬಗ್ಗೆ ಕನಿಕರ ತೋರುತ್ತಾರೆ, ನಿಮ್ಮನ್ನು ತಿರಸ್ಕರಿಸುತ್ತಾರೆ ಎಂದಿದ್ದಾರೆ.