ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ಗಾಜಾದಿಂದ ಈಜಿಪ್ಟ್‌ಗೆ ಪ್ರವೇಶಿಸಲು ಜನತೆಗೆ ಅನುಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್​ ಹಾಗೂ ಹಮಾಸ್​ ಸಂಘರ್ಷ ಮುಂದುವರಿದಿದ್ದು, ಹೀಗಾಗಿ ಮೊದಲ ಬಾರಿಗೆ ಗಾಜಾದಿಂದ ಈಜಿಪ್ಟ್‌ಗೆ ರಫಾ ಕ್ರಾಸಿಂಗ್‌ ಮೂಲಕ ಜನತೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

400ಕ್ಕೂ ಹೆಚ್ಚು ವಿದೇಶಿ ಪಾಸ್‌ಪೋರ್ಟ್​ ಹೊಂದಿರುವವರಿಗೆ ಗಾಜಾವನ್ನು ತೊರೆಯಲು ಅನುಮತಿ ನೀಡಲಾಗಿದೆ ಎಂದು ಪ್ಯಾಲೇಸ್ಟೈನ್​ ಕ್ರಾಸಿಂಗ್​ ಪ್ರಾಧಿಕಾರ ತಿಳಿಸಿದೆ.

ಇಸ್ರೇಲ್​ ಮತ್ತು ಹಮಾಸ್​ ನಡುವೆ ಸಂಘರ್ಷ ಉಂಟಾಗಿ ಮೂರು ವಾರಗಳು ಕಳೆದಿವೆ. ನೂರಾರು ಜನರು ವಿವಿಧ ಸಮಯಗಳಲ್ಲಿ ಬಂದು ರಫಾ ಕ್ರಾಸಿಂಗ್‌ಗೆ ಬಂದು ಜಮಾಯಿಸಿದ್ದರು. ಆದರೆ, ಈಜಿಪ್ಟ್, ಇಸ್ರೇಲ್ ಮತ್ತು ಹಮಾಸ್ ನಡುವಿನ ಬಿಕ್ಕಟ್ಟಿನಿಂದಾಗಿ ಅಲ್ಲಿಂದ ಹೊರಬರಲು ಅನುಮತಿ ನೀಡಿರಲಿಲ್ಲ.

ಇದೀಗ ಸಂಘರ್ಷದಲ್ಲಿ ಗಾಯಗೊಂಡ 80ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗಾಜಾದಿಂದ ಈಜಿಪ್ಟ್‌ಗೆ ಬುಧವಾರ ಕರೆದುಕೊಂಡು ಬರಲಾಗಿದೆ ಎಂದು ಈಜಿಪ್ಟ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಈಜಿಪ್ಟ್ ಕಡೆಯಿಂದ ಆಂಬ್ಯುಲೆನ್ಸ್‌ಗಳು ರಾಫಾ ಕ್ರಾಸಿಂಗ್‌ಗೆ ಪ್ರವೇಶಿಸಿದ್ದು, ಹತ್ತಿರದ ಪಟ್ಟಣವಾದ ಶೇಖ್ ಜುವೈದ್‌ನಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲಾಗಿದೆ. ಈ ಸಂಘರ್ಷ ಶುರುವಾದ ನಂತರ ಅಲ್ಲಿಂದ ಹೊರಬಂದ ಜನರನ್ನು ಗಾಜಾಕ್ಕೆ ಮರಳಲು ಇಸ್ರೇಲ್​ ಅನುಮತಿಸುವುದಿಲ್ಲ ಎಂಬ ಕಾರಣದಿಂದಾಗಿ ಪ್ಯಾಲೆಸ್ಟೈನ್ ನಿರಾಶ್ರಿತರನ್ನು ಸ್ವೀಕರಿಸುವುದಿಲ್ಲ ಎಂದು ಈಜಿಪ್ಟ್ ಹೇಳಿತ್ತು.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇದುವರೆಗೆ ಪ್ಯಾಲೇಸ್ಟೈನಿಯನ್​ಗಳ ಸಾವಿನ ಸಂಖ್ಯೆ 8,525ಕ್ಕೆ ಏರಿಕೆಯಾಗಿದೆ ಎಂದು ಗಾಜಾದಲ್ಲಿರುವ ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹಿಂಸಾಚಾರ ಮತ್ತು ಇಸ್ರೇಲ್​ ದಾಳಿಗಳಲ್ಲಿ 122ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಕೊಲೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!