ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಈಗ ಭಾಷಾ ವಿವಾದವೊಂದು ಭುಗಿಲೆದ್ದಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠದ ಮುಖ್ಯ ದ್ವಾರದಲ್ಲಿರುವ ಕನ್ನಡದ ಶ್ಲೋಕದ ಫಲಕದ ವಿರುದ್ಧ ಈಗ ತೆಲುಗು ಭಾಷಿಕರು ಧ್ವನಿ ಎತ್ತಿದ್ದಾರೆ.
ಮಠದ ಪ್ರವೇಶ ದ್ವಾರದಲ್ಲಿ “ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ…” ಎಂಬ ಶ್ಲೋಕವನ್ನು ಹಲವು ವರ್ಷಗಳಿಂದ ಕನ್ನಡ ಅಕ್ಷರಗಳಲ್ಲಿ ಬರೆಯಲಾಗಿದೆ. ಆದರೆ, ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ಸೇರಿರುವುದರಿಂದ, ಅಲ್ಲಿ ತೆಲುಗು ಭಾಷೆಯ ಫಲಕಗಳೇ ಇರಬೇಕು ಎಂಬುದು ಸ್ಥಳೀಯರು ಹಾಗೂ ಕೆಲವು ತೆಲುಗು ಭಾಷಿಕರ ವಾದ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರಗೊಂಡಿದ್ದು, ಅನೇಕರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಕನ್ನಡ ಫಲಕವನ್ನು ತೆರವುಗೊಳಿಸಿ ತೆಲುಗು ಫಲಕ ಅಳವಡಿಸಲು ಒತ್ತಾಯಿಸುತ್ತಿದ್ದಾರೆ.
ಮತ್ತೊಂದೆಡೆ, ಈ ಫಲಕವು ಇಂದಿನದಲ್ಲ, ದಶಕಗಳಿಂದಲೂ ಕನ್ನಡದಲ್ಲಿಯೇ ಇದೆ. ಮಠದ ಇತಿಹಾಸ ಮತ್ತು ಸಂಪ್ರದಾಯದ ಭಾಗವಾಗಿ ಈ ಫಲಕವನ್ನು ಉಳಿಸಿಕೊಳ್ಳಲಾಗಿದೆ ಎಂದು ಭಕ್ತರು ಹೇಳುತ್ತಿದ್ದಾರೆ. ರಾಯಚೂರು ಗಡಿಗೆ ಹೊಂದಿಕೊಂಡಂತಿರುವ ಈ ಕ್ಷೇತ್ರದಲ್ಲಿ ಕನ್ನಡ ಮತ್ತು ತೆಲುಗು ಭಾಷಿಕರು ಸಮಾನವಾಗಿ ನೆರೆದಿದ್ದರೂ, ಈಗ ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಕಿತ್ತಾಟ ಭಕ್ತರಲ್ಲಿ ಆತಂಕ ಮೂಡಿಸಿದೆ.

