ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4ರಷ್ಟು ದಾಖಲಾಗಿತ್ತು ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಇಂಡೋನೇಷ್ಯಾದ ಪೂರ್ವ ನುಸಾ ತೆಂಗರಾ ಪ್ರಾಂತ್ಯದ ರಾಜಧಾನಿ ಕುಪಾಂಗ್‌ನಿಂದ 15 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.
ಭೂಮಿ ಕಂಪಿಸುತ್ತಿದ್ದಂತೆ ಭಯಭೀತರಾದ ಜನ ಮನೆಗಳಿಂದ ರಸ್ತೆಗೆ ಓಡಿ ಬಂದರು. ಆದರೆ, ಈ ಭೂಕಂಪದಿಂದ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಇಂಡೋನೇಷಿಯನ್ ಜಿಯೋಲಾಜಿಕಲ್ ಏಜೆನ್ಸಿ ತಿಳಿಸಿದೆ. ಸಂಭವಿಸಿದ ಭೂಕಂಪದಿಂದ ಆಸ್ತಿ ಹಾನಿಯಾದ ಬಗ್ಗೆ ಯಾವುದೇ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಭಾರೀ ಭೂಕಂಪನದಿಂದಾಗಿ ಹಲವು ನಗರಗಳಲ್ಲಿ ಮನೆಗಳು ಅಲುಗಾಡಿದ್ದರಿಂದ ಜನರು ಭಯಭೀತರಾಗಿದ್ದರು.
ಭೂಕಂಪದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ ಕುಪಾಂಗ್‌ನ ಆಸ್ಟನ್ ಹೋಟೆಲ್ ಉದ್ಯೋಗಿ ಸ್ಯಾಮ್ಯುಯೆಲ್ ಮಲೋಹಾನಾ, ಇದ್ದಕ್ಕಿದ್ದಂತೆ ಕಟ್ಟಡವೇ ಅಲುಗಾಡಿಂದಂತಾಯಿತು. ತಕ್ಷಣವೇ ಹೊಟೇಲ್‌ನಲ್ಲಿ ತಂಗಿದ್ದ ಅತಿಥಿಗಳು ತಮ್ಮ ಕೊಠಡಿಗಳನ್ನು ತೊರೆದು ಹೋಟೆಲ್ ಮುಂದೆ ಜಮಾಯಿಸಿದರು. ಸದ್ಯ ಯಾರಿಗೂ ಯಾವುದೇ ಜೀವ ಹಾನಿ ಆಗಿಲ್ಲ ಎಂದರು.