ಹೊಸದಿಗಂತ ವರದಿ ರಾಣೇಬೆನ್ನೂರ:
ಕಂದಾಯ ಸಚಿವ ಕೃಷ್ಣಭೈರೇಗೌಡ ಗುರುವಾರ ನಗರದ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ಸುಮಾರು ನೂರಾರು ವರ್ಷಗಳ ಕಾಗದ ದಾಖಲೆಗಳು ಇವೆ. ಅವುಗಳು ಈಗಾಗಲೇ ಶಿಥಲಾವ್ಯವಸ್ಥೆಯಲ್ಲಿವೆ ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ತಹಶೀಲ್ದಾರರ ಜೊತೆಗೆ ಮಾತನಾಡಿದ್ದೇನೆ ಎಂದರು.
ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಪ್ರತಿ ಇಲಾಖೆಯ ಅಧಿಕಾರಿಗಳು ಎಚ್ಚರವಹಿಸಬೇಕು. ಈಗಾಗಲೇ ಶಿಥಿಲಾವ್ಯವಸ್ಥೆಯಲ್ಲಿರುವ ದಾಖಲೆಗಳು ಕಳೆದುಹೋದರೆ ಜನರಿಗೆ ಬಹಳ ಸಮಸ್ಯೆಯಾಗುತ್ತದೆ ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ, ಡಿಜಿಟಲ್ ರೂಪದಲ್ಲಿ ಮುಂದಿನ ಪೀಳಿಗೆಗೂ ಉಳಿಸುವಂತಹ ಕಾರ್ಯ ಮಾಡಬೇಕು.
ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು, ರೆಕಾರ್ಡ್ ರೂಪಗಳಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಅವುಗಳನ್ನು ಉಳಿಸುವಂತಹ ಕೆಲಸ ಮಾಡಬೇಕು. ಅದಕ್ಕಾಗಿ ಸರ್ವೇ ರೂಂ ಹಾಗೂ ರೆಕಾರ್ಡ್ ರೂಂ ಗಳನ್ನು ವೀಕ್ಷಣೆ ಮಾಡಿದ್ದೇನೆ. ಒಟ್ಟಾರೆ ಕಂದಾಯ ಇಲಾಖೆ ಜನಗಳಿಗೆ ಅನುಕೂಲವಾಗುವ ಹಾಗೆ ಪ್ರಾಮಾಣಿಕ ಕೆಲಸ ಮಾಡಬೇಕು. ಜನರಿಗೆ ನಮ್ಮಿಂದ ತೊಂದರೆಯಾಗಬಾರದು ಎಂದರು. ಜನರ ಜೀವನಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು ಅದು ನಮ್ಮ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಹನುಮಂತಪ್ಪ ಶಿರಹಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.